News and articles

ಶೃಂಗಾರರಸ


ರಸಗಳ ರಾಜ ಶೃಂಗಾರ. ಯಕ್ಷಗಾನ ಪ್ರಸಂಗಗಳಲ್ಲೂ ಶೃಂಗಾರಕ್ಕೊಂದು ವಿಶಿಷ್ಟ ಸ್ಥಾನವಿದೆ. ಸುಲಲಿತ ಪದಾವಲಿ,  ಸುಂದರ ಅಭಿನಯ, ಕಾವ್ಯವನ್ನು ಕಟ್ಟಿಕೊಡುವ ವಾಗ್ವಿಶೇಷತೆ ಇವೆಲ್ಲ ಶೃಂಗಾರರಸವನ್ನು ಚೆನ್ನಾಗಿ ಪೋಷಿಸುತ್ತವೆ. ರತಿಯು ಶೃಂಗಾರದ ಸ್ಥಾಯಿಭಾವ. ನಾಯಕನಿಗೆ ನಾಯಕಿ, ನಾಯಕಿಗೆ ನಾಯಕ ಈ ರಸಕ್ಕೆ ಆಲಂಬನವಾಗಿದೆ.ಚಂದ್ರ, ಬೆಳದಿಂಗಳು, ಭ್ರಮರ, ಲತಾಮಂಟಪ, ಉದ್ಯಾನ, ಏಕಾಂತ ಮೊದಲಾದವು ಉದ್ದೀಪನವಿಭಾವಗಳು. ಕುಡಿನೋಟ, ಕಳ್ಳನೋಟ,  ಭ್ರೂವಿಕ್ಷೇಪ, ತುಟಿಕಚ್ಚುವುದು, ಕೆಲವು ಅಂಗಚೇಷ್ಟೆ ಇವೆಲ್ಲ ಇದರ ಅನುಭಾವಗಳು. ಲಜ್ಜೆ, ಹಾಸ ಇವೆಲ್ಲ ಸಂಚಾರಿ ಭಾವಗಳು. ಸಿಟ್ಟು, ಉಗ್ರತೆ, ಆಲಸ್ಯ, ಜುಗುಪ್ಸೆ, ಮರಣ ಇಂತಹ ಸಂಚಾರಿಭಾವವನ್ನು ಹೊರತು ಪಡಿಸಿ ಉಳಿದವು ಈ ರಸಕ್ಕೆ ಪೋಷಕವಾಗಿತ್ತವೆ. ಇದರ ರ‍್ಣ ಶ್ಯಾಮ, ದೇವತೆ ವಿಷ್ಣು.  ಶೃಂಗಾರದಲ್ಲಿ ಮುಖ್ಯವಾಗಿ ಎರಡು ವಿಧ- ೧.ಸಂಭೋಗ(ಸಂಯೋಗ), ೨. ವಿಪ್ರಲಂಭ.   ಕಾವ್ಯಲಕ್ಷಣಕಾರರ ಮತದಂತೆ ಸಂಯೋಗಶೃಂಗಾರಕ್ಕಿಂತಲೂ ವಿಪ್ರಲಂಭಶೃಂಗಾರವೇ(ನಾಯಕ/ನಾಯಕಿ ಸಮೀಪದಲ್ಲಿ ಇಲ್ಲದೆ ಇರುವುದು) ಹೆಚ್ಚು ಶಕ್ತಿಯುತವಾಗಿದೆ. ಯಕ್ಷಗಾನ ಪ್ರಸಂಗದ  ಉದಾಹರಣೆಯನ್ನು ನೋಡುವುದಾದರೆ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮಪ್ರತಿಜ್ಞೆ ಪ್ರಸಂಗದ ಶಂತನುವಿನ ಪದ್ಯ. ಕಲಕೀರವಾಣಿ ನೀನಾರಾತ್ಮಭವಳು/ ಚೆಲುವೆ ನಿನ್ನಯ ಪೆಸರ ವಂಚಿಸದೆ ಪೇಳು// ಮಲಯಗಂಧಿನಿ ಎನ್ನ ಸ್ಮರದಹಿಪ ಕೇಳು/ ಒಲಿಸುವರೆ ಬಂದಿಹೆನು ಒಲವಿನಿಂದೇಳು// ಇಲ್ಲಿ ಕಲಕೀರ ವಾಣಿ, ಚೆಲುವೆ, ಮಲಯಗಂಧಿನಿ, ಸ್ಮರದಹಿಪ ಈ ಪದಗಳು  ಶೃಂಗಾರರಸದಭಿನಯಕ್ಕೆ, ರಸಸ್ಫುರಣೆಗೆ ಪೂರಕವಾಗಿವೆ. ಶಂತನುವಿಗೆ ಸತ್ಯವತಿಯೇ ಆಲಂಬನ. ನದಿಯ ಜುಳು ಜುಳು ನಾದ, ಸತ್ಯವತಿಯ ಮೈಯಿಂದ ಬಂದ ಗಂಧ, ಯಮುನೆಯನ್ನು ಕಂಡಾಗ ಗಂಗೆಯ ಸ್ಮರಣೆ ಇವೆಲ್ಲ ಉದ್ದೀಪನವಿಭಾವವಾಗಿವೆ. ಸತ್ಯವತಿಯ ಸೌಂರ‍್ಯವನ್ನು ಸವಿಯುವುದೇ ಅನುಭಾವ.  ಹೀಗೆ ಅಭಿನಯ ಮತ್ತು ನಾಟ್ಯಗಳಿಂದ ಶೃಂಗಾರಾಭಿವ್ಯಕ್ತಿಯಾಗುತ್ತದೆ. ಯಕ್ಷಗಾನದಲ್ಲಿ ರ‍್ಥಗಾರಿಕೆಯು ಒಂದು ವಿಶಿಷ್ಟ ಶಕ್ತಿಯಾಗಿದೆ. ಅದು ಕೇವಲ ಪದ್ಯದ ಸಾರಾಂಶವನ್ನು ಹೇಳುವುದಲ್ಲ. ಪದ್ಯ ಎಂಬ ಮೊಗ್ಗು ಹೂವಾಗಿ ಅರಳುವ ವಿಕಾಸದ ಸೊಬಗು. ಸೂತ್ರವು ವ್ಯಾಖ್ಯಾನವಾಗುವ ರೀತಿ. ಕಲ್ಲು ಶಿಲ್ಪವಾಗುವ ಉಪಕ್ರಮ. ಇಲ್ಲಿ ಈ ಪದ್ಯಕ್ಕೆ ರ‍್ಥದಲ್ಲಿ ಸ್ತ್ರೀಯ ಸೌಂರ‍್ಯ ರ‍್ಣನೆ, ಸ್ಮರನ ಬಾಧೆಯಿಂದಾದ ಸ್ಥಿತಿ,  ಸಂಸಾರದ ಸವಿಯ ಸಾರ ಇವನ್ನೆಲ್ಲ ಮಾತನಾಡುವ ಮೂಲಕ ಶೃಂಗಾರರಸದಡುಗೆಯನ್ನು ಬಡಿಸಿ ಪ್ರೇಕ್ಷಕನು ಸವಿರುಚಿಯುಣ್ಣುವಂತೆ ಮಾಡಬಹುದು.  ಇದು ಸಂಯೋಗಶೃಂಗಾರಕ್ಕೆ ಒಂದು ಉದಾಹರಣೆ. ವಿಪ್ರಲಂಭ ಶೃಂಗಾರದ ಉದಾಹರಣೆಯಾಗಿ ಒಂದು ಪದ್ಯವನ್ನು ನೋಡುವುದಾದರೆ, ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ಮಾರುತಿ ಪ್ರತಾಪದ ಸತ್ಯಭಾಮೆಯ ಪದ್ಯ. ಬಾರನ್ಯಾಕೆ ಮಾರಜನಕ ಸಾರಸಾಕ್ಷಿಯೇ/ ಮೂರುದಿನಗಳಾಯ್ತು ಬರದೆ ಬಾರಿ ಬಳಲಿದೆ// ಯಾರ ನಾರಿ ನಿಲಯದೊಳಗೆ ಸೇರಿರುವನೋ/ ನೀರೆ  ಪೋಗಿ ಕರೆದು ತಾರೆ ಮಾರಜನಕನ// ಇಲ್ಲಿ ಬಾರನ್ಯಾಕೆ ಮಾರಜನಕ, ಮೂರುದಿನಗಳಾಯ್ತು ಬರದೆ ಇವೆಲ್ಲ ವಿರಹದ ವೇದನೆಯನ್ನು ಬಹಳ ಚೆನ್ನಾಗಿ ಪ್ರಕಟಿಸುತ್ತವೆ. ಯಾರ ನಾರಿ ನಿಲಯದೊಳಗೆ ಸೇರಿ ಕೊಂಬನೋ ಎಂಬ ಮತ್ಸರವು ವಿಪ್ರಲಂಭ ಶೃಂಗಾರವನ್ನು ಮತ್ತಷ್ಟು ಉದ್ದೀಪನ ಗೊಳಿಸಿದೆ. ನೀರೆ ಪೋಗಿ ಕರೆದು ತಾರೆ ಎಂಬಲ್ಲಿ ವಿರಹವನ್ನು ಸಹಿಸದ ಭಾವ ವ್ಯಕ್ತವಾಗುತ್ತದೆ.  ಬೇಸರ, ಹತಾಶೆಗಳು ಅನುಭಾವವಾಗಿ ಮತ್ಸರ ಸಂಚಾರಿ ಭಾವವಾಗಿದೆ. ರತಿಯು ಸ್ಥಾಯಿಭಾವವಾಗಿ ಶೃಂಗಾರರಸಸ್ಫುರಣೆಯಾಗುತ್ತದೆ.

ರಜನೀಶ ಹೊಳ್ಳ, ಕೆಂಪಿನಮಕ್ಕಿ

ಕಾಫಿ ನಾಡಲ್ಲೊಂದು ಯಕ್ಷ ಸಂಸ್ಥೆ - ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ


ಕಡಲತೀರದ ಪರಿಪೂರ್ಣ ಕಲೆಎಂದೇ ಜನಜನಿತವಾದ ಯಕ್ಷಗಾನವು ಅಲ್ಲಿನ ಎಲ್ಲರ ಉಸಿರಲ್ಲೂ ಬೆರೆತಿರುತ್ತದೆ. ಚೆಂಡೆಯ ಸದ್ದು ಎಲ್ಲರ ಕಿವಿ ನಿಮಿರಿಸುತ್ತದೆ. ಕಾಲಲ್ಲಿ ಹೆಜ್ಜೆ ಹಾಕಿಸುತ್ತದೆ. ಮಲೆನಾಡಿಗೆ ಅದು ಹೊಸತು. ಆದರೆ ಕಾಫಿ ನಾಡಾದ ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಊರು ಪಚ್ಛೆ ಹಳ್ಳಿ ಹಳುವಳ್ಳಿಯಲ್ಲಿ ಚೆಂಡೆ ಮದ್ದಳೆಯ ಸದ್ದು ಮೊಳಗುತ್ತದೆ. ಕಾಂತೀಯ ಶಕ್ತಿಯನ್ನು ಹೊಂದಿರುವ ಕಲೆಯನ್ನು ಮಲೆನಾಡಿನ ಹೊಸಿಲಿಗೆ ತಂದ ಕೀರ್ತಿ ಹಳುವಳ್ಳಿಯ ಸೊಸೆ ಕಡಲೂರಿನ ಮಗಳು ಶ್ರೀಮತಿ ಜ್ಯೋತಿ ಟಿ ಎನ್ ರವರಿಗೆ ಸಲ್ಲುತ್ತದೆ.  ಅಲ್ಲಿಂದ ಪ್ರಾರಂಭವಾಯಿತು ನೋಡಿ, ಹತ್ತು ಹಲವು ಯಕ್ಷಗಾನ ಚಟುವಟಿಕೆಗಳು.  "ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ" ಎಂಬ ಸಂಸ್ಥೆಯನ್ನು ಆಕೆ ಸ್ಥಾಪಿಸಿಯೇ ಬಿಟ್ಟರು. ಪಣ ತೊಟ್ಟು ಆಸಕ್ತ ಮಕ್ಕಳಿಗೆ ಯಕ್ಷಗಾನದ ತಾಲೀಮು ಸುರು ಮಾಡಿಕೊಂಡರು ಜೊತೆಜೊತೆಗೆ ಪ್ರದರ್ಶನಕ್ಕೆ ಬೇಕಾದ ವೇಷ-ಭೂಷಣ, ಬಣ್ಣ, ಹಿಮ್ಮೇಳದವರನ್ನು ಕರೆಸಿ ಹಳುವಳ್ಳಿಯಲ್ಲೊಂದು ಯಕ್ಷಗಾನ ಪ್ರದರ್ಶನ ಕೊಟ್ಟೆ ಬಿಟ್ಟರು ಈ ಸಾಹಸಿ ಹೆಣ್ಣು ಮಗಳು. ಇದು ಮಲೆನಾಡಿನಲ್ಲಿ “ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ" ಹುಟ್ಟಿಕೊಂಡ ಕಥೆ. ಈ ಸಂಸ್ಥೆಗೆ ತರಬೇತುದಾರರಾಗಿ ಮಂಗಳೂರಿನಿAದ ಬರುತ್ತಿದ್ದ, ದಿನಕರ್ ಪಚ್ಚನಾಡಿ, ಶರತ್ ಕುಮಾರ್ ಕದ್ರಿ ಮೊದಲಾದವರು ಸಾಕಷ್ಟು ಕೊಡುಗೆ ನೀಡಿದ್ದಾರೆ.  ಭಾಗವತರಾದ ಜಿ ಕೆ ನಾವುಡ, ಗುರುಗಳಾದ ರಮೇಶ್ ಶೆಟ್ಟಿ ಸಂಸ್ಥೆಗೆ ಅನುಭವಗಳ ಕೊಡುಗೆ ನೀಡಿದ್ದಾರೆ.  ಸುಧನ್ವ ಮೋಕ್ಷ, ಸುದರ್ಶನ ಗರ್ವಭಂಗ, ಬಬ್ರುವಾಹನ, ಮಹಿಷವಧೆ, ಶಶಿಪ್ರಭಾ ಪರಿಣಯ, ದಕ್ಷ ಯಜ್ಞ, ಇಂದ್ರಜಿತು ಕಾಳಗ, ಕೃಷ್ಣಲೀಲೆ - ಕಂಸವಧೆ, ಶುಂಭವಧೆ, ಗಣೇಶ ಕೌತುಕ, ಮುರಾಸುರ ವಧೆ, ಜಾಂಬವತಿ ಕಲ್ಯಾಣ, ಗಿರಿಜಾ ಕಲ್ಯಾಣ, ಸುಧನ್ವ ಮೋಕ್ಷ, ಮಹಿಷಮರ್ದಿನಿ, ವೀರಮಣಿ ಕಾಳಗ, ಪೂತನಿಸಂಹಾರ, ಶ್ವೇತಕುಮಾರ ಚರಿತ್ರೆ ಹೀಗೆ ಹಲವಾರು ಪ್ರಸಂಗಗಳ ಪ್ರದರ್ಶನ ನೀಡಿದ ಹಿರಿಮೆ ಈ ಸಂಸ್ಥೆಯದು. ಕನ್ನಡ ಸಂಸ್ಕೃತಿ ಇಲಾಖೆ ನಡೆಸುವ ೨೦ ನಿಮಿಷಗಳ ಯಕ್ಷಗಾನದಿಂದ ಹಿಡಿದು, ಆಹೋರಾತ್ರಿಯೂ ಕೂಡ ತಂಡ ಯಕ್ಷಗಾನ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದೆ. ದುರ್ಗಾ ಮಕ್ಕಳ ಮೇಳ ಕಟೀಲು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಸತತ ೭ ನೇ ವರ್ಷದ ಪ್ರದರ್ಶನ ನೀಡಿ, ಜನಮಾನಸದಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಮೂಡಿಸಿರುವ ತಂಡ , ೨೦೧೯ ರಲ್ಲಿ ದೆಹಲಿಯ ಕನ್ನಡ ಸಂಘದಲ್ಲಿ ಮಹಿಷ ವಧೆ ಪ್ರಸಂಗ ಪ್ರದರ್ಶಿಸಿ ರಾಜಧಾನಿಯಲ್ಲಿ ಕೂಡ ಜನ ಮನ್ನಣೆ ಪಡೆದಿದೆ. ರಾಷ್ಟ್ರ - ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಮತಿ ಜ್ಯೋತಿಯವರ ಕಲಾಸೇವೆಯನ್ನು ಪರಿಗಣಿಸಿ ಕಳಸ ರೋಟರಿ ಹಾಗೂ ಜೇ ಸಿ ಐ ರವರು ಸನ್ಮಾನಿಸಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕಾರ್ಕಳದಲ್ಲಿ, ಬೆಳುವಾಯಿಯಲ್ಲಿ ಶ್ರೇಷ್ಠ ಯಕ್ಷಗುರು, ಪಟ್ಲ ಫೌಂಡೇಶನ್ ಕೊಡಮಾಡುವ ಯಕ್ಷನಿಧಿ , ಆಂಜನೇಯ ಚಿಕ್ಕಮೇಳ ಪುತ್ತೂರುನಿಂದ ಸಮ್ಮಾನ , ತಾರಾನಾಥ ವರ್ಕಾಡಿಯವರಿಂದ ಬೆಳ್ಮಣ್ ನಲ್ಲಿ ಸಮ್ಮಾನ ,ಮಹಿಳಾ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರು "ವನಿತಾ ಶ್ರೀ "' , ಮನ್ವಂತರ ಬಳಗ ಕಳಸ ಇವರಿಂದ "ಮಲೆನಾಡ ಯಕ್ಷ ಸಿರಿ" ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ನಾಗಭೂಷಣ್ ಹೊಳ್ಳ ಸಂಸ್ಥೆಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.  ಶ್ರೀಮತಿ ಸರಳ ಭಟ್, ಶ್ರೀಮತಿ ಶುಭಮತಿ, ಶ್ರೀಮತಿ ಸವಿತಾ ಸಂಸ್ಥೆಯ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದಾರೆ. 

ಲೇಖಕರು: ಶ್ರೀಮತಿ ಚೈತ್ರ ಎಸ್ಪಿ

ನಾದದಲ್ಲಿ ಲೀನವಾದ ಕಂಚಿನ ಕಂಠ - ಉಭಯ ತಿಟ್ಟುಗಳ ಸವ್ಯಸಾಚಿ - ಕಡತೋಕ ಮಂಜುನಾಥ ಭಾಗವತ


ಧರ್ಮಸ್ಥಳ ಮೇಳವೊಂದರಲ್ಲೇ ಸುಮಾರು ಮೂರುವರೆ ದಶಕ ಸೇವೆ ಸಲ್ಲಿಸಿದ ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕ,ಕಂಚಿನ ಕಂಠದ ಭಾಗವತ, ಮರವಂತೆ ದಿ. ನರಸಿಂಹ ದಾಸರ ನಂತರ ಉಭಯ ತಿಟ್ಟುಗಳಲ್ಲಿ ಸುಶ್ರಾಯವಾಗಿ ಹಾಡಬಲ್ಲ,ತನ್ನ ಅದ್ಬುತ ಕಂಠಸಿರಿಯಿAದ ಕಡತೋಕ ಘರಾಣೆ ಎಂಬ ಹೊಸ ಶೈಲಿಯನ್ನು ಹುಟ್ಟು ಹಾಕಿದ, ಬಡಗು ತೆಂಕುತಿಟ್ಟುಗಳ ಕ್ರಾಂತಿಕಾರಿ ಭಾಗವತ, ಕಡತೋಕ ಮಂಜುನಾಥ ಭಾಗವತರು ಈಗಿಲ್ಲ ಎನ್ನುವುದು ಯಕ್ಷಗಾನಾಭಿಮಾನಿಗಳಿಗೆ ಸಹಿಸಲಾರದ ಸತ್ಯ.
ಯಕ್ಷಗಾನ ಕ್ಷೇತ್ರಕ್ಕೆ ಅತಿರಥ, ಮಹಾರಥ ಕಲಾವಿದರನ್ನು ನೀಡಿದ ಉ.ಕ. ಜಿಲ್ಲೆಯ ಕಡತೋಕದ ಆ ಕಾಲದ ಹಿರಿಯ ಭಾಗವತ ಶಂಭು
ಭಾಗವತರ ಮಗನಾಗಿ ಜನಿಸಿದ ಇವರು ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ಅಣ್ಣಂದಿರ ಆಸರೆಯಲ್ಲಿ ಬೆಳೆದವರು.ಭಾಗವತ ವೆಂಕಟರಮಣ ಯಾಜಿ,ಕರ್ಕಿ ಪರಮಯ್ಯ ಹಾಸ್ಯಗಾರ ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯನಾಗಿ, ಬಡಗುತಿಟ್ಟಿನ ರಂಗಜ್ಞಾನ, ತಾಳ ಲಯಾದಿಗಳನ್ನು ಅಭ್ಯಾಸ ಮಾಡಿದ ಇವರು ಬಳಿಕ ಮಾಂಬಾಡಿ ಭಾಗವತರಲ್ಲೂ ಬಲಿಪ ಭಾಗವತರಲ್ಲೂ ತೆಂಕುತಿಟ್ಟಿನ ನೆಡೆಯನ್ನು ಅಭ್ಯಾಸ ಮಾಡಿದವರು.ಕೆಲ ಕಾಲ ಶಿಕ್ಷಕ ವೃತ್ತಿ ಮಾಡಿದ ಇವರು ಹಿಂದಿ ಜಾಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಪ್ರತಿಭಾವಂತರು.
ಸಿದ್ದಿ,ಪ್ರಸಿದ್ದಿ,ಜನಪ್ರಿಯತೆ,ಸಾಧನೆ ಎಲ್ಲಾ ನೆಲೆಗಳಲ್ಲೂ ಪರಿಪೂರ್ಣರೆಂದು ಪರಿಗಣಿಸಲ್ಪಡುವ ಇವರು ಯಕ್ಷಗಾನ ರಂಗಭೂಮಿಯ ಅದ್ಬುತ ಪ್ರತಿಭೆ ಎನ್ನುವುದುನಿರ್ವಿವಾದ.ಕರ್ಕಿ, ಕೆರೆಮನೆ,ಕೊಳಗಿಬೀಸ್,ಮೇಳಗಳಲ್ಲಿ ತಿರುಗಾಟ ಮಾಡಿ ನಂತರ ತೆಂಕಿನ ಕೂಡ್ಲು, ಮೇಳಗಳಿಗೆ ಬಂದು ನಂತರ ನಿರಂತರ ಮೂರುವರೆ ದಶಕ ಧರ್ಮಸ್ಥಳ ಮೇಳದಲ್ಲಿ ಮಹಾ ಮಹಾನ್ ಕಲಾವಿದರನ್ನು ಕುಣಿಸಿದರು.ಆಗ ಡೇರೆ ಮೇಳವಾಗಿದ್ದ ಧರ್ಮಸ್ಥಳ ಮೇಳದಲ್ಲಿ ಪೌರಾಣಿಕ ಪ್ರಸಂಗಗಳಿಗೆ ಹೊಸ ಆಯಾಮ ನೀಡಿ ಕಡತೋಕ ಶೈಲಿಯ ಭಾಗವತಿಕೆಯನ್ನು ಹುಟ್ಟು ಹಾಕಿದರು.ಕುದ್ರೆಕೊಡ್ಲು ರಾಮ ಭಟ್, ಚಿಪ್ಪಾರು, ಕೃಷ್ಣಯ್ಯ ಬಲ್ಲಾಳ್, ಮುಂತಾದವರ ಹಿಮ್ಮೇಳದಲ್ಲಿ,
ಕುರಿಯ ವಿಠಲ ಶಾಸ್ತ್ರಿ ಕುಂಬಳೆಸುAದರ ರಾವ್, ಕೆ.ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಪುತ್ತೂರು ನಾರಾಯಣ ಹೆಗಡೆ,ವಿಟ್ಲ ಶಾಸ್ರಿಗಳು,ಪಾತಾಳ ವೆಂಕಟರಮಣ ಭಟ್, ನಯನ ಕುಮಾರ ಅಲ್ಲದೆ ಸಮಕಾಲೀನ ಪ್ರಸಿದ್ದರಾದ ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ ಶೆಟ್ಟಿ,ತಾರಾನಾಥ ಬಲ್ಯಾಯ ಮುಂತಾದ ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ಕುಣಿಸಿ ಮೇಳಕ್ಕೆ ಕೀರ್ತಿ ತಂದರು.ಆ ಕಾಲದಲ್ಲಿ ತುಂಬಿದ ಡೇರೆಯಲ್ಲಿ ಪ್ರದರ್ಶಿತವಾಗುತಿದ್ದ ಪೌರಾಣಿಕ ನೆಲೆಗಟ್ಟಿನ ಪ್ರಸಂಗಗಳಾದ ಅಮರವಾಹಿನಿ,ಮಹಾಕಲಿ ಮಗಧೇಂದ್ರ ರಂಭಾ ರೂಪ ರೇಖಾ, ಕಾಯಕಲ್ಪ,ಮಹಾರಥಿ ಕರ್ಣ,ಮಹಾಬ್ರಾಹ್ಮಣ,ಚಕ್ರೇಶ್ವರ ಪರೀಕ್ಷಿತ,ಸಹಸ್ರ ಕವಚ ಮೋಕ್ಷ ಮುಂತಾದ ಪ್ರಸಂಗಗಳು ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿದವು.ಅಪೂರ್ವವಾದ ಬಾಯಿತಾಳದಿಂದ ಪ್ರಸಿದ್ದರಾದ ಇವರು ಚಂದ್ರಗಿರಿ ಅಂಬು, ಬಣ್ಣದ ಮಹಾಲಿಂಗ, ಮುಂತಾದವರ ಬಣ್ಣದ ವೇಷವನ್ನು ರಂಗಕ್ಕೆ ಹೊರಡಿಸುವುದೆ ಒಂದು ವಿಸ್ಮಯ. ತನ್ನ ಸುತ್ತ ಯಕ್ಷಗಾನದ ವಾತಾವರಣ ಸೃಷ್ಟಿಸುವ ಇವರ ಭಾಗವತಿಕೆ ಹಾಸ್ಯರಸಕ್ಕೂ ಹೊಸ ಆಯಾಮ ನೀಡಿದೆ.ತಾಳಮದ್ದಳೆಯಲ್ಲೂ ಅನುಭವಿಸಿ ಹಾಡುವ ಇವರು ಅರ್ಥಧಾರಿಗಳಿಗೂ,ಸಂಘಟಿಕರಿಗೂ ಅಚ್ಚುಮೆಚ್ಚು.
ನಿರಾತಂಕವಾಗಿ, ನಿರರ್ಗಳವಾಗಿ,ನಿರಾಯಾಸವಾಗಿ ಏರುಶ್ರುತಿಯಲ್ಲಿ ಸ್ಪಷ್ಟ ಉಚ್ಚಾರ,ಖಚಿತವಾದ ಲಯ,ತಾಳಗತಿ,ತಪ್ಪದ ಛಂದಸ್ಸು, ಸಾಹಿತ್ಯ ಪರಿಶುದ್ದಿ, ರಂಗವಿಧಾನ,ರಾಗಮಾಲಿಕೆ, ಪ್ರಸಂಗಾನುಭವ, ಕಲಾವಿದರನ್ನು ಹದವರಿಯು ಕುಣಿಸುವ ಜಾಣ್ಮೆ, ಸಮ ಹಾಗು ವಿಷಮ ನೆಡೆಯಲ್ಲು ಹಾಡಬಲ್ಲ ಇವರ ಭಾಗವತಿಕೆ ಶೈಲಿ ಸರ್ವಾಂಗ ಸುಂದರ ನಿರ್ದೇಶಕನೊಬ್ಬರಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನೂ ಹೊಂದಿದೆ.ಉತ್ತರ ಕನ್ನಡದ ರಂಗ ಪರಂಪರೆಯನ್ನು ತೆಂಕುತಿಟ್ಟಿನಲ್ಲಿ ತೋರ್ಪಡಿಸಿದ ಕೀರ್ತಿ ಇವರಿಗಿದೆ.
ಬಡಗಿನ ಭಾಗವತಿಕೆಗೆ ಮದ್ದಳೆಗಾರರಾದ ದುರ್ಗಪ್ಪ ಗುಡಿಗಾರ್, ಪ್ರಭಾಕರ ಭಂಡಾರಿ, ತೆಂಕಿನಲ್ಲಿ ಕುದ್ರೆಕುಡ್ಲು, ನಿಡ್ಲೆ, ಚಿಪ್ಪಾರು ಎಲ್ಲರ ಅಚ್ಚುಮೆಚ್ಚು ಕಡತೋಕರು.ಅಪೂರ್ವವಾದ ಬಾಯಿ ತಾಳ ಹಾಕಿ ಮದ್ದಳೆವಾದನಕ್ಕೆ ಅವಕಾಶ ನೀಡುವ ಏಕಮೇವ ಭಾಗವತರವರು.ತೆಂಕುತಿಟ್ಟಿನ ಪ್ರಸಿದ್ದ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯರಲ್ಲಿ ಇವರ ಶೈಲಿಯನ್ನು ಗುರುತಿಸಬಹುದಾಗಿದೆ.
ಐದು ದಶಕಗಳ ಕಾಲ ಕಂಠಶಿರಿಯಿAದ ಯಕ್ಷಗಾನ ಪ್ರಿಯರನ್ನು ರಂಜಿಸಿದ ಕಡತೋಕರು ಪ್ರಸಂಗಕರ್ತರಾಗಿಯೂ ಪ್ರಸಿದ್ದರು ಅವರು ರಚಿಸಿದ ಕವಿರತ್ನ ಕಾಳಿದಾಸ ಪ್ರಸಂಗದ ಪದ್ಯಗಳು ಅಪೂರ್ವವಾದ ಸಾಹಿತ್ಯದಿಂದ ಕೂಡಿದ್ದು ಬಹು ಜನಪ್ರಿಯ ಪ್ರಸಂಗವಾಗಿದೆ. ವಿಕ್ರಮೋರ್ವಶೀಯಂ ಸಹಿತ ಹತ್ತಾರು ಪ್ರಸಂಗಗಳನ್ನು ರಚಿಸಿದವರು. ಹಲವಾರು ಯಕ್ಷಗಾನ ಸಂಬAಧಿ ಲೇಖನಗಳನ್ನು ಸಹ ಬರೆದವರು. ಪ್ರಯೋಗ ಶೀಲ ರಂಗನಡೆಯಿAದ ಪಾತ್ರಧಾರಿಗಳ ಅಂತರAಗ ಅರಿತು ಅಭಿನಯಕ್ಕೆ ಹೆಚ್ಚು ಅವಕಾಶ ನೀಡುವ ಅವರ ಭಾಗವತಿಕೆ ಎಳೆಯರಿಗೆ ಸ್ಫೂರ್ತಿ, ಕಲಾವಿದರಿಗೆ ಅಚ್ಚುಮೆಚ್ಚು, ಭಾಗವತರುಗಳಿಗೆ ಗೌರವ.
ಯಕ್ಷಗಾನ ಕಲೆಗೆ ಪತ್ರಿಕೆಯೊಂದರ ಅಗತ್ಯವಿದೆಯೆಂದು ಬಹು ಬೇಗನೆ ಅರ್ಥೈಸಿಕೊಂಡ ಇವರು ಅರವತ್ತು ವರ್ಷಗಳ ಹಿಂದೆಯೇ ತನ್ನ ಇಪ್ಪತ್ತೆರಡರ ಹರಯದಲ್ಲಿ ಯಕ್ಷಗಾನ ಪತ್ರಿಕೆ ಆರಂಭಿಸಿದ ದೂರದರ್ಶಿತ್ವವುಳ್ಳವರವರು.ಅದೇ ಪತ್ರಿಕೆ ಈಗ ಅವರ ಮಗನಾದ ಗೋಪಾಲಕೃಷ್ಣ ಭಾಗವತರ ಮೂಲಕ ಯಕ್ಷರಂಗ ಎಂಬ ಹೆಸರಿನಲ್ಲಿ ಪ್ರಕಾಶಿತವಾಗುತ್ತಿದೆ.ಯಕ್ಷಗಾನ ಕ್ಷೇತ್ರವು ಸದಾ ನೆನಪಿಸಿಕೊಳ್ಳುವ ಪಾರ್ತಿಸುಬ್ಬನ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಇವರಿಗೆ ಸರಕಾರ ನೀಡುವ ಪಾರ್ತಿಸುಬ್ಬ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ.ಕರ್ನಾಟಕ ರಾಜ್ಯ ಪ್ರಶಸ್ತಿ ಸಹಿತ ಯಕ್ಷಗಾನದ ಇತರ ಎಲ್ಲಾ ಪ್ರಶಸ್ತಿಗಳು ಅರ್ಜಿ ಇಲ್ಲದೆ ಇವರನ್ನು ಹುಡುಕಿಕೊಂಡು ಬಂದಿದೆ.
ಹದಿನೈದು ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡ ಕಡತೋಕರು ತನ್ನ ಕಂಠಕ್ಕೆ ವಿಶ್ರಾಂತಿ ನೀಡಿ ಮನೆಯಲ್ಲಿಯೇ ಉಳಿದಿದ್ದರು.ಭಾಗವತಿಕೆ ಎಂದರೆ ಹೀಗಿರಬೇಕು ಎಂದು ತೋರಿಸಿದ ಆ ಕಂಚಿನ ಕಂಠ ತುಂಬು ಬಾಳುವೆ ನೆಡೆಸಿ ತನ್ನ ಎಂಬತ್ತೆರಡರ ಹರೆಯದಲ್ಲಿ ಇಹಲೋಕದ ಯಾತ್ರೆ ಮುಗಿಸಿದೆ. ಆ ಸ್ಥಾನಕ್ಕೆ ಪರ್ಯಾಯವಿಲ್ಲವೆನ್ನುವುದೇ ದೌರ್ಭಾಗ್ಯ.

ಲೇಖಕರು - ಪ್ರೋ.ಎಸ್. ವಿ.ಉದಯ ಕುಮಾರ ಶೆಟ್ಟಿ ಮಣಿಪಾಲ, ಪ್ರಾಧ್ಯಾಪಕರು, ಎಂ.ಐ.ಟಿ.ಮಣಿಪಾಲ

ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಮಾರ್ಗ


ಯಕ್ಷಗಾನ ಭಾಗವತಿಯಲ್ಲಿ ಕ್ರಾಂತಿ ಮೂಡಿಸಿದ ೩೦ ವರ್ಷದ ಹಿಂದೆ ನಮ್ಮನ್ನಗಲಿದ, ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕ ಕಾಳಿಂಗ ನಾವಡರು ಯಕ್ಷಗಾನ ಭಾಗವತಿಕೆಗೆ ಹೊಸದೊಂದು ಶೈಲಿಯನ್ನು ಹುಟ್ಟು ಹಾಕಿದವರು. ತಮ್ಮ ಕಂಚಿನ ಕಂಠದಿAದ ಹೊಸ ಹೊಸ ಯಕ್ಷಗಾನೇತರ

ರಾಗಗಳನ್ನು ಪರಿಚಯಿಸಿದ ಇವರು ಭೈರವಿ, ಮಧ್ಯಮಾವತಿ, ಮೋಹನ, ಬಿಲಹರಿ, ಸಾವೇರಿ ಕಾಂಬೋದಿ, ಮುಂತಾದ ಹಳೆಯ ರಾಗಗಳಿಗೆ ಹೊಸ ಸಂಚಾರ ನೀಡಿದವರು. ಚಾಂದ್, ಬೇಹಾಗ್, ಬಹುದಾರಿ, ಚಾರುಕೇಶಿ, ಅಬೇರಿ, ರೇವತಿ ಮುಂತಾದ ಯಕ್ಷಗಾನದಲ್ಲಿ ಬಳಕೆಯಾಗದ ರಾಗಗಳನ್ನು ಬಳಸಿಕೊಂಡು ಯಕ್ಷಗಾನಕ್ಕೆ ಹೊಸ ಹಿಮ್ಮೇಳಾಸಕ್ತರನ್ನು ಮುಖ್ಯವಾಗಿ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು, ನಾಗಶ್ರೀ ಪ್ರಸಂಗದ ನೀಲ ಗಗನದೊಳು ಮೇಘಗಳು, ಚೆಲುವೆ ಚಿತ್ರಾವತಿಯ ಧರಣಿಮಂಡಲ ಮಧ್ಯದೊಳಗೆ, ಚೈತ್ರಪಲ್ಲವಿಯ ರಾಗಾನುರಾಗಿಣಿ, ಮುಂತಾದ ಹೊಸ ಮಾದರಿಯ ಪದ್ಯಗಳನ್ನು ಹೊಸ ಹೊಸ ರಾಗದಲ್ಲಿ ನರಂಜಿಸುವAತೆ  ಹಾಡುತಿದ್ದರು. ನಾವಡರು ಹೇಗೆ ತನ್ನ ಗುರುಗಳಾದ ನಾರ್ಣಪ್ಪ ಉಪ್ಪೂರರ ಮಾರ್ವಿ ಶೈಲಿಯ ಭಾಗವತಿಕೆ ಮತ್ತು ತಂದೆ ರಾಮಚಂದ್ರ ನಾವಡರ ಕುಂಜಾಲು ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡರು ಎನ್ನುವುದು ಅವರ ಹೊಸ ಶೈಲಿಯ ಉಗಮಕ್ಕೆ ಕಾರಣವಾಯಿತು. ಆರಂಭದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶೈಲಿಯಲ್ಲಿ ಹಾಡುತಿದ್ದ ಅವರು ಕ್ರಮೇಣ ತಂದೆಯವರ ಕುಂಜಾಲು ಶೈಲಿಗೆ ಹೊರಳಿಕೊಂಡರು. ಆಗ ಮಾರ್ವಿ ಹಾಗು ಕುಂಜಾಲು ಶೈಲಿಯ ಸುಂದರ ಸಂಗಮವಾಗಿ ಹೊಸ ಶೈಲಿಯ ಉಗಮವಾಯಿತು ಅದೇ ನಾವಡರ ಶೈಲಿ. ಇಂದು ಅನೇಕರು ಕುಂಜಾಲು ಶೈಲಿಯಲ್ಲಿ ಹಾಡಿದರೆ ಉಪ್ಪೂರರ ಶೈಲಿಯಲ್ಲಿ ಹಾಡಲಾರರು. ಉಪ್ಪೂರರ ಶೈಲಿಯ ಭಾಗವತರು ಕುಂಜಾಲು ಶೈಲಿಯಲ್ಲಿ ಹಾಡಲಾರರು. ನಾವಡರಂತಹ ಕೆಲವೇ ಕೆಲವರಿಗೆ ಮಾತ್ರ ಇದು ಸಾಧ್ಯವಾಗಿದೆ. ನಾವಡರು ಅತಿಯಾಗಿ ಮೆಚ್ಚುತ್ತಿದ್ದ ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಕ್ರಷ್ಣಾರ್ಜುನ, ರತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಜಾಂಬವತಿ ಕಲ್ಯಾಣಕ್ಕೆ ಹೆಚ್ಚು ಪ್ರಚಲಿತವಿದ್ದ ಕುಂಜಾಲು ಶೈಲಿಯನ್ನೂ, ಚೂಡಾಮಣಿ-ರಾಮಾಂಜನೇಯ-ಭಸ್ಮಾಸುರ ಮುಂತಾದ ಪ್ರಸಂಗಗಳಿಗೆ ಮಾರ್ವಿ ಶೈಲಿಯನ್ನೂ ಬಳಸುತಿದ್ದರು. ಕುಂಜಾಲು ಶೇಷಗಿರಿ ಕಿಣಿಯವರಿಂದ ಪ್ರಾರಂಭಗೊAಡ ಕುಂಜಾಲು ಶೈಲಿಯನ್ನು ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಪಾಟೀಲ್, ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್ ಸಮರ್ಥವಾಗಿ ರೂಢಿಸಿಕೊಂಡರು. ಅದೇ ಪರಂಪರೆಯಲ್ಲಿ ಹಾಡಿ ಮಂದಾರ್ತಿ ಮೇಳದಲ್ಲಿ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರು ನಾವಡರ ತಂದೆ ರಾಮಚಂದ್ರ ನಾವಡರು. ಇಲ್ಲಿ ಚಾಲು ಕುಣಿತಗಳು ಕಡಿಮೆ ಇದ್ದು ಮದ್ದಳೆಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ಇರಲಿಲ್ಲ. ತಂದೆ ಶ್ರೀನಿವಾಸ ಉಪ್ಪೂರರಿಂದ ಬಳುವಳಿಯಾಗಿ ಬಂದ ಮಾರ್ವಿ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ನಾರ್ಣಪ್ಪ ಉಪ್ಪೂರರು ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕರು ಮತ್ತು ದುರ್ಗಪ್ಪ ಗುಡಿಗಾರರೊಂದಿಗೆ ಯಕ್ಷಗಾನ ಭಾಗವತಿಕೆಗೆ ಹೊಸ ಆವಿಷ್ಕಾರ ಮಾಡಿದರು. ಕುಣಿತದಲ್ಲಿ ನಿಪುಣರಾದ ಕೆರೆಮನೆ ಕಲಾವಿದರು ಚಿಟ್ಟಾಣಿಯವರು ವೀರಭದ್ರ ನಾಯ್ಕರು ಶಿರಿಯಾರ ಮಂಜುನಾಯ್ಕರು ಕೋಟ ವೈಕುಂಠ ಮುಂತಾದವರು ಈ ಶೈಲಿಯನ್ನು ಸಮರ್ಥವಾಗಿ ರಂಗದಲ್ಲಿ ತೋರ್ಪಡಿಸಿದರು. ಉಪ್ಪೂರರ ಶೈಲಿಯಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇರುವುದರಿಂದ ಉತ್ತರ ಕನ್ನಡದ ಕಲಾವಿದರು ಇದನ್ನು ಹೆಚ್ಚು ನೆಚ್ಚಿಕೊಂಡರು. ಶೇಷಗಿರಿ ಕಿಣಿ ಮತ್ತು ರಾಮಚಂದ್ರ ನಾವಡರ ಕುಂಜಾಲು ಶೈಲಿಯಲ್ಲಿ ಆಲಾಪಣೆಯ ಸೊಬಗಿದೆ. ಇಲ್ಲಿ ಹಿರಿಯಡ್ಕ ಗೋಪಾಲರಾಯರು, ಸುರಗಿಕಟ್ಟೆ ಬಸವಗಾಣಿಗರು ಪದ್ಯಕ್ಕಷ್ಟೇ ಮದ್ದಳೆ ನುಡಿಸುತಿದ್ದರು. ಹಾಗಾಗಿ ಇವೆರಡು ಬೇರೆ ಬೇರೆ ಶೈಲಿಗಳು. ಕಾಳಿಂಗ ನಾವಡರ ಇನ್ನೊಂದು ವಿಶೇಷ ಕಪ್ಪು ಮೂರರ ಶ್ರುತಿಗಿಂತಲೂ ಮೇಲೆ ಹಾಡಬಲ್ಲರು ಬಿಳಿ ಎರಡರ ಕೆಳಗೂ ಹಾಡಬಲ್ಲರು. ಕೆಲವರಿಗೆ ಏರು ಶ್ರುತಿ ಹೊರತು ಇಳಿಯಲ್ಲಿ ಹಾಡಲಾರರು ಇನ್ನು ಕೆಲವರು ಏರುಶ್ರುತಿಯಲ್ಲಿ ಹಾಡಲಾರರು. ಮಾರ್ವಿ ಶೈಲಿಯನ್ನು ತೆಂಕುತಿಟ್ಟಿನ ಬಲಿಪರ ಶೈಲಿಗೆ ಹೋಲಿಸಬಹುದು. ಕುಂಜಾಲು ಶೈಲಿಯಲ್ಲಿ ಕರ್ನಾಟಕಿ ಸಂಗೀತದ ಛಾಯೆ ಇದೆ. ನಾವಡರು ಗುರುಗಳ ಮಾರ್ವಿ ಶೈಲಿಯನ್ನು ಬಳಸಿಕೊಂಡು ಕರ್ನಾಟಕಿ ಸಂಗೀತದ ಲೇಪ ಮಾಡಿ ಹೊಸ ಶೈಲಿಗೆ ಕಾರಣೀಕರ್ತರಾದರು. ಉಪ್ಪೂರರು ತನ್ನ ಅಪೂರ್ವವಾದ ಬಾಯಿತಾಳದ ಮೂಲಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೋಟ ವೈಕುಂಠ, ಎಂ.ಎ.ನಾಯ್ಕ, ಮುಂತಾದ ಅನೇಕ ಕಲಾವಿದರಲ್ಲಿ ಹುದುಗಿದ್ದ ಪ್ರತಿಭೆಯನ್ನು ಹೊರಗೆಳೆದರೆ ನಾವಡರು ಐರೋಡಿ ಗೋವಿಂದಪ್ಪ ರಾಮನಾಯರಿ, ಅರಾಟೆ ಮಂಜುನಾಥ, ಶಿರಿಯಾರ ಮಂಜುï‌ನಾಯ್ಕ್, ಬಳ್ಕೂರ ಕೃಷ್ಣ ಯಾಜಿ, ಕೊಂಡದಕುಳಿ, ಗೋಪಾಲ ಆಚಾರ್ಯ, ಕಿನ್ನಿಗೋಳಿ, ಹಳ್ಳಾಡಿ, ಜಲವಳ್ಳಿ, ನಗರ ಜಗನ್ನಾಥ ಶೆಟ್ಟಿ, ಕುಮ್ಟಾ ಗೋವಿಂದ ನಾಯಕ್ ಮುಂತಾದವರ ಪ್ರಸಿದ್ದಿಗೆ ಕಾರಣರಾದರು. ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಜಾಂಬವತಿ ಕಲ್ಯಾಣ ಮುಂತಾದ ಪ್ರಸಂಗಗಳಲ್ಲಿ ಅವರ ಪದ್ಯ ಜಾನುವಾರುಕಟ್ಟೆಯವರ ಪದ್ಯವನ್ನು ಹೋಲುತ್ತಿರುವುದನ್ನು ಗಮನಿಸಬಹುದು. ಆದರೆ ನಾವಡರ ಹೊಸ ಶೈಲಿ ಬಡಗುತಿಟ್ಟಿನ ಇನ್ನೊಂದು ಮೂರನೇ ಹೊಸ ಶೈಲಿ ಎಂದು ಎಲ್ಲಿಯೂ ದಾಖಲಾಗದಿದ್ದದ್ದು ಯಕ್ಷಗಾನದ ದೌರ್ಭಾಗ್ಯ ಸರಿ.

¥ÉÆæÃ.J¸ï.«.GzÀAiÀÄ PÀĪÀiÁgÀ ±ÉnÖ ªÀÄtÂ¥Á®

ಶ್ರೀ ದೇವಿ ಮಹಾತ್ಮೆ


ನಿಮಗಿದು ಗೊತ್ತೇ? - ೧೯೩೦ ರಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕಾಸರಗೋಡು ಸಮೀಪದ ಕೊರಕ್ಕೋಡು ಎಂಬಲ್ಲಿ ಮೊದಲ ಪ್ರದರ್ಶನ ಕಂಡಿತು. ಅಂದಿನ ಪ್ರಥಮ ಪ್ರದರ್ಶನದಲ್ಲಿ ಶ್ರೀ ದೇವಿಯ ಪಾತ್ರದಲ್ಲಿ ಪಾಣಾಜೆ ಗಣಪತಿ ಭಟ್ಟರು ಕಾಣಿಸಿಕೊಂಡಿದ್ದರು. ಬಣ್ಣದ ವೇಷಧಾರಿ ಬಣ್ಣದ ಕುಂಜ಼್ ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು.

#ಶುಭಾಶಯ_ಜೈನ್ ವಿರಚಿತ #ದಾನ_ಚಿಂತಾಮಣಿ #ಯಕ್ಷಗಾನ_ಆಖ್ಯಾನದ ಮೇಲೊಂದು #ಬೀಸುನೋಟ…


ದಿನಾಂಕ 10-06-2023ನೇ ಶನಿವಾರದಂದು #ಬ್ರಹ್ಮಾವರದ #ಬಂಟರ_ಭವನದಲ್ಲಿ ನಡೆದ #ದಾನ_ಚಿಂತಾಮಣಿ ಎಂಬ #ನೂತನ_ಯಕ್ಷಗಾನ ಆಖ್ಯಾನದ ಕುರಿತು #ಯಕ್ಷಗಾನ ಆಯೋಜಿಸಿದ್ದ #ನಾದ_ನೂಪುರ_ಯಕ್ಷೋತ್ಥಾನ_ಟ್ರಸ್ಟ್ ನಿಂದ ಪ್ರೇಕ್ಷಕರಿಗೆ #ವಿಮರ್ಶೆ ಬರೆಯುವ #ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ೧೮ ಜನ #ಪ್ರೇಕ್ಷಕರು ತಮ್ಮ #ವಿಮರ್ಶೆಯನ್ನು ಬರೆದು ಕಳುಹಿಸಿದ್ದರು. ಅದರಲ್ಲಿ #ಅತ್ಯುತ್ತಮ ಎಂದು ಆರಿಸಲಾದ ವಿಮರ್ಶೆಗೆ ಐದು ಸಾವಿರ ರೂಪಾಯಿಗಳ #ಬಹುಮಾನವನ್ನ #ಟ್ರಸ್ಟ್ ಘೋಷಿಸಿದೆ. #ಬಹುಮಾನಕ್ಕೆ ಆಯ್ಕೆಯಾದ #ಯಕ್ಷಗಾನ_ವಿಮರ್ಶೆ ಇದು..
ಜನಾನುರಾಗ ಬದಲಾದಂತೆ #ಕಲೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಬದಲಾವಣೆಗಳಿಗೆ ತೆರೆದುಕೊಂಡಾಗ ಅದರ ಪರಿಧಿಯ ವಿಸ್ತಾರ ಸಾಧ್ಯ. #ಸಮಕಾಲೀನ_ಯಕ್ಷಗಾನ_ರಂಗಭೂಮಿ ಇಂತಹ #ಬದಲಾವಣೆಯ ಸಾಧ್ಯತೆಗಳನ್ನು ಈಗೀಗ ಹೆಚ್ಚು ನೆಚ್ಚಿಕೊಂಡಂತಿದೆ.ಈ ಕ್ಷೇತ್ರಕ್ಕೆ ಇತ್ತೀಚಿನ ದಿನಮಾನಗಳಲ್ಲಿ ಹರಿದು ಬರುತ್ತಿರುವ ಹೊಸ #ಪ್ರಸಂಗ_ಪಠ್ಯಗಳು ಈ ಮಾತನ್ನು ಘನೀಭವಿಸುತ್ತವೆ. #ಯಕ್ಷಗಾನ_ರಂಗಭೂಮಿಗೆ ಆಖ್ಯಾನಗಳ ಹೊಸ ದಿಸೆಯ ಹಾದಿಯಲ್ಲಿನ ಒಂದು #ಕೈದೀವಿಗೆ #ಶುಭಾಶಯ_ಜೈನ್. #ಯಕ್ಷಗಾನದ #ಉಭಯ_ತಿಟ್ಟುಗಳಿಗೂ #ಪ್ರಸಂಗ ಒದಗಿಸುತ್ತಿರುವ #ಶುಭಾಶಯರ ಮತ್ತೊಂದು #ಕೃತಿ #ದಾನ_ಚಿಂತಾಮಣಿ ಇತ್ತೀಚೆಗೆ #ಬ್ರಹ್ಮಾವರ ಬಂಟರ ಭವನ ದಲ್ಲಿ #ಎಂ_ಕೆ_ರಮೇಶ್_ಆಚಾರ್ರ ದಿಗ್ದರ್ಶನದಲ್ಲಿ ರಂಗ ಕಂಡಿದ್ದು ಈ ಪ್ರದರ್ಶನದ ಕುರಿತು ಒಂದು #ಬೀಸುನೋಟ.
#ಕೊಟ್ಟು_ಮರೆಯುವ_ಸುಖದ
#ಗುಟ್ಟು_ಅರಿಯಲೇಬೇಕೆ?
#ಇಟ್ಟುಕೋ_ಮುಗಿಲ_ನೆನಪು!
ಕೊಡುವುದರಲ್ಲೇ ಸುಖ ಕಾಣುವ, ದಾನ- ಧರ್ಮದ ಸುಕೃತದಲ್ಲೇ ಬದುಕಿನ ಪಾರಮಾರ್ಥಕತೆಯನ್ನು ಅರಸುವ, ದಾನ ಕೈಂಕರ್ಯದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಗೆ ಸರಿಮಿಗಿಲೆನಿಸುವ ಶುಭವಂತಿಯ ಸರಳ ಬದುಕು ಹಲವು ಸಂಕೀರ್ಣತೆಯ ಹಳವಂಡಗಳಿಗೆ ಬಿದ್ದಾಗ ಆಕೆ ಆ ಎಲ್ಲಾ ಸಂಕಷ್ಟಗಳನ್ನು ಮೀರಿ ಮತ್ತೆ ಬದುಕನ್ನು ತಹಬಂದಿಗೆ ತಂದುಕೊಳ್ಳುತ್ತಾಳಾದರೆ ಅದಕ್ಕೆ ಕಾರಣ ಆಕೆಯ ಧೀಶಕ್ತಿಯೆ? ಆಕೆ ಏಕೋ ದೃಢಭಕ್ತಿಯಿಂದ ಎಡೆಬಿಡದೆ ಆರಾಧಿಸುವ ಜಿನೇಶ್ವರನ ಕೃಪೆಯೆ?ದಾನಾದಿ ಕರ್ಮಗಳಿಂದ ಆಕೆ ಗಳಿಸಿರಬಹುದಾದ ಪುಣ್ಯಫಲವೆ? ಕಥೆಯ ಓಘ ಪ್ರೇಕ್ಷಕನನ್ನು ಸಂದರ್ಭಾನುಸಾರ ಈ ತೆರನಾದ ಚಿಂತನೆಯ ಒರೆಗೆ ನೂಕಿ ನವಿರಾಗಿ ಹೊರಗೆಳೆಯುತ್ತದೆ.
ಶುಭವಂತಿಯ ಬಾಳ ಪಯಣದ ಹಾದಿಗುಂಟ ಹಾಯುವ ವಿನಂತಿ, ಪ್ರಸೇನದೇವ,ಕಾಂತಿ,ಕುಂತಿ, ಪನ್ನಗ ಮೊದಲಾದ ಪಾತ್ರಗಳನ್ನು ಪ್ರಸಂಗಕರ್ತೆ ಪೋಷಿಸಿದ ಪರಿ ಆಕೆ ಅತ್ಯಂತ ಧ್ವನಿಪೂರ್ಣವಾಗಿ ಪ್ರಸಂಗದ ಮೂಲಕ ಯಾವ ಸಂದೇಶವನ್ನು ಪ್ರೇಕ್ಷಕ ಸಮೂಹಕ್ಕೆ ರವಾನಿಸಬೇಕೆನ್ನುವುದರ ಬಗೆಗೆ ಹೆಚ್ಚು ಸ್ಪಷ್ಟವಿರುವುದನ್ನು ವಿಷದಪಡಿಸುತ್ತದೆ.
ಚಾಲ್ತಿಯಲ್ಲಿರುವ ತರುಣ ಕಲಾವಿದ ವಿಶ್ವನಾಥ ಹೆನ್ನಾಬೈಲು ಇಂದ್ರನಾಗಿ ರಂಗ ಪ್ರವೇಶಿಸುವುದರೊಂದಿಗೆ ದಾನ ಚಿಂತಾಮಣಿಯ ಕಥೆ ಮೊದಲ್ಗೊಳ್ಳುತ್ತದೆ. ಅರೆ!ಹೆನ್ನಾಬೈಲು ಇಂದ್ರನೆ? ಪ್ರೇಕ್ಷಕ ಚಕಿತಗೊಳ್ಳುತ್ತಿರುವಾಗಲೆ ಭೂಲೋಕದಿಂದ ಹವಿಸ್ಸು ಸಮರ್ಪಣೆಯ ಪರಿಯ ಕುರಿತಂತೆ ಅಸಮಾಧಾನಗೊಂಡ ಇಂದ್ರ ಅದನ್ನು ಸುಲಲಿತಗೊಳಿಸುವ ಬಗೆ ಅರಿಯದೆ ಬ್ರಹ್ಮನೆಡೆಗೆ ಧಾವಿಸುತ್ತಾನೆ.ಬ್ರಹ್ಮ, 'ಜ್ಞಾನ ಬ್ರಹ್ಮ'ನೂ ಅಹುದು ಅನಿಸುವ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಎಂ ಕೆ ರಮೇಶ ಆಚಾರ್ರದ್ದು. ಬ್ರಹ್ಮನ ಭರವಸೆಯ ನುಡಿಗಳಿಂದ ಅತ್ತ ಇಂದ್ರ ಸಂತ್ರಪ್ತನಾಗುತ್ತಲೇ ಇತ್ತ
ಭಾಗವತರು ಭೂಲೋಕದ ಕಥೆ ಉಲಿಯಲನುವಾಗುತ್ತಾರೆ. ಚಿಕ್ಕಪ್ಪನ ದೇಖರೇಖೆಯಲ್ಲಿ ಉಂಡುಟ್ಟು ಸುಖವಾಗಿದ್ದ ಚಕೋರಿ ವಿನಂತಿ ಆತನ ಬುಲಾವಿನ ಮೇರೆಗೆ ಪ್ರವೇಶಿಸಲಾಗಿ ಚಿಕ್ಕಪ್ಪ ತೀರ್ಥಯಾತ್ರೆಗೆ, ಮಗಳು ತನ್ನ ಅಕ್ಕನೂರಿಗೆ ಪಯಣಿಸುವ ತೀರ್ಮಾನವಾಗುತ್ತದೆ. ತವರಿಗೆ ಹೊರಟು ನಿಂತ ವಿನಂತಿಯ ಕಾಲುಗಳಲ್ಲೀಗ ನವೋಲ್ಲಾಸ! ಕಾಲ್ಗೆಜ್ಜೆಗಳಲ್ಲಿ ಭೀಮ್ ಪಲಾಸ !!
'ನಾ ಚಿಮ್ಮುವ ಕಾರಂಜಿಯಾದೆ
ತವರಿನೂರ ಪಯಣಕೆ...'
ಈ ಪದ್ಯಕ್ಕೆ ಕಲಾವಿದ ವಂಡಾರು ಗೋವಿಂದ ತವರಿಗೆ ಹೊರಟ ಹೆಣ್ಣಿನ ಅಷ್ಟೂ ಸಂಭ್ರಮ-ಸಡಗರವನ್ನು,ಆ ಸಂತಸದ ಹೊನಲನ್ನು ತಮ್ಮ ಅಸೀಮ ಭಾವ-ಭಂಗಿಗಳಿಂದ, ಚೆಲ್ವಿಕೆಯಿಂದ, ಮಿಡುಕಿನಿಂದ,ನೃತ್ಯದಿಂದ ಪ್ರೇಕ್ಷಕನಿಗೆ ದಾಟಿಸುವಲ್ಲಿ ಸಂಪೂರ್ಣ ಯಶಕಾಣುತ್ತಾರೆ.ಕಲಾವಿದನ ಈ ಅಪೂರ್ವ ಭಾವಾಭಿವ್ಯಕ್ತಿಗೆ ಮೆಚ್ಚುಗೆಯ ಚಪ್ಪಾಳೆಗಳು. ಅಕ್ಕನಾಲಯವನ್ನು ಹೊಕ್ಕ ತಂಗಿ ವಿನಂತಿ ಖುಷಿಯ ವಿನಿಮಯದ ತರುವಾಯ ಊಟೋಪಚಾರದ ವಿಷಯ ಬರುತ್ತಲೇ,ಅಕ್ಕ ಶುಭವಂತಿಯಲ್ಲಿ ಬೆಟ್ಟದ ನೆಲ್ಲಿಯ ಉಪ್ಪಿನಕಾಯಿಯನ್ನು ನೆನೆಸಿಕೊಳ್ಳುವುದು ಹೆಣ್ಮಕ್ಕಳು ತವರನ್ನು ಯಾವ,ಯಾವ ವಸ್ತು- ವಿಷಯಗಳಿಗಾಗಿ miss ಮಾಡಿಕೊಳ್ಳುತ್ತಾರೆ ಎನ್ನುವ ಅಚ್ಚರಿಯಾಚೆ, ಈ ಹೆಣ್ಣು ಜಗತ್ತನ್ನು ಅರ್ಥೈಸಿಕೊಳ್ಳಲು ಉಳಿದ ಜಗತ್ತಿಗೇಕೆ ಸುಲಭಸಾಧ್ಯವಲ್ಲ ಎನ್ನುವ ಪ್ರಶ್ನೆ(?)ಗೂ ಉತ್ತರ ಎನ್ನುವಂತಿತ್ತು ಆ ಸಂಭಾಷಣೆ.ಈ ಶುಭವಂತಿಯೇ ಇಡೀ ಕಥಾನಕದ ಪ್ರಧಾನ ಪಾತ್ರ. ಅತ್ಯಂತ ಸಹಜವಾಗಿ, ಬದುಕಿನ ಭಾಗವೇ ಎನ್ನುವಂತೆ ಅಥವಾ ವಿಶಾಲಾರ್ಥದಲ್ಲಿ ಬದುಕೇ ಎನ್ನುವಂತೆ,ಯಾವ ಬಿರುದು-ಬಹುಮಾನಗಳ ದೂರದಾಸೆಯೂ ಇಲ್ಲದೆ ದಾನಗೈಯುತ್ತಲೇ ಬದುಕುವ ಶುಭವಂತಿ ದೇಹಿ ಎಂದು ಬಂದವರಿಗೆ ಇಲ್ಲ ಎನ್ನುವ ಜಾಯಮಾನದ ಹೆಣ್ಣಲ್ಲ! ಅದೊಂದು ದಿನ ಕೊಟ್ಟು, ಕೊಟ್ಟು ಕೈ ಬರಿದಾಗಿ ನಿಂತಾಗ ಯಾರದ್ದೋ ಅಮ್ಮಾ... ದಾನ ಎನ್ನುವ ದನಿ ಕೇಳುತ್ತಲೇ ತಾನು ಅರ್ಚಿಸಿ,ಆರಾಧಿಸುವ ಜಿನೇಶ್ವರನ ಮೂರ್ತಿಯನ್ನೇ ಕೈಯೆತ್ತಿ ಕೊಟ್ಟ ದಾನ ಚಿಂತಾಮಣಿ ಶುಭವಂತಿ! ಶುಭವಂತಿಯ ಔದಾರ್ಯವನ್ನು ಪರೀಕ್ಷಿಸಲು ಸ್ವತಃ ನಾಡ ದೊರೆಯೇ ಮುಖ ಮರೆಸಿ ಬಂದಿರಲು, ಅಕ್ಕ ಶುಭವಂತಿಯ ಕೈ ಬರಿದಾಗಿರಲು, ತಂಗಿ ವಿನಂತಿ ಮೃತ್ಯು ನಿವಾರಕವೆಂದು ಧರಿಸಿರುವ ಕೊರಳಹಾರವನ್ನು ಅರೆಕ್ಷಣವೂ ಆಲೋಚಿಸದೆ ಬಿಚ್ಚಿ ಅಕ್ಕನ ಕೈಗಿತ್ತು ತಗೋ ದಾನ ನೀಡು... ಎನ್ನುವ ತ್ಯಾಗ ಪ್ರೇಕ್ಷಕನ ಹೃನ್ಮನದಲ್ಲಿ ಸ್ಥಾಯಿಯಾಗುವಂತೆ ಯಲಗುಪ್ಪ ಮತ್ತು ವಂಡಾರು ಈ ಕಲಾವಿದದ್ವಯರು ಪ್ರತಿಭೆ ಮೆರೆಯುತ್ತಾರೆ. ಚಿತ್ತೂರು ಪುರದರಸ ಕಾಳರಾತ್ರಿಯಲ್ಲಿ ಕಳ್ಳ ಕಾಕರೆದುರು ಇನ್ನೇನು ಕೈಸೋಲುವಷ್ಟರಲ್ಲಿ ಸಕಾಲದಲ್ಲಿ ಬಂದೊದಗಿ ಕಳ್ಳರ ಸದೆಬಡಿದು ದೊರೆಯ ರಕ್ಷಿಸಿದ ವೀರ ಯಾರೆಂದು ಕೇಳಿದರೆ ಆತ ದೊರೆಯ ಮಂತ್ರಿ ಮಹೋದಯನ ಮಗ ಪ್ರಸೇನ ದೇವ ಎನ್ನುವುದು ವೇದ್ಯವಾಗುತ್ತಲೇ ಸಂಪ್ರೀತನಾದ ದೊರೆ ಒಂದಿನಿತೂ ತಡಬಡಾಯಿಸದೆ ಹುಡುಗನನ್ನು ತನ್ನ ಸೇನಾ ದಂಡನಾಯಕನನ್ನಾಗಿ ನಿಯುಕ್ತಿಗೊಳಿಸುತ್ತಾನೆ.
ದಂಡ ನಾಯಕ ಪ್ರಸೇನ ದೇವನೋ ಏರುಜವನಿಕೆಯರಾದ ಶುಭವಂತಿ, ವಿನಂತಿಯರ ಅನುಪಮ ರೂಪ-ಗುಣ-ಲಾವಣ್ಯಗಳಿಗೆ ಸೋತು ಶರಣಾಗಿ ಅದೊಂದು ತಿಳಿ ಸಂಜೆ ಸಹೋದರಿಯರನ್ನು ಅಡ್ಡಗಟ್ಟಿ
ಕರವ ಮುಗಿವೆ ದೇಹಿ ಎಂದು ನಡೆಸಿಕೊಡುವಿರೆ?
ಕರವ ಪಿಡಿದು ಎನ್ನ ಧನ್ಯ ನಾಗಿ ಮಾಡಿರೆ...
ಎನ್ನುತ್ತಾ ಪ್ರಮದೆಯರೆದುರು ತನ್ನ ಪ್ರೇಮನಿವೇದನೆಯನ್ನು ಮಾಡಿಯೇ ಬಿಡುತ್ತಾನೆ.ಹಾಗೆ ಪ್ರೇಮವನ್ನು ನಿವೇದಿಸಿಕೊಳ್ಳುವಲ್ಲಿ ರಸೋಲ್ಲಾಸಗಳನ್ನು ಸುರಿದು ಅಭಿನಯಿಸಿದ ಪರಿಗೆ,ಆ ಆಳ್ತನಕ್ಕೆ, ಆ ಸೌಜನ್ಯಕ್ಕೆ ಯಾರಾದರೂ ಆತನ ಪ್ರೀತಿಯನ್ನು ಒಪ್ಪಿಕೊಳ್ಳಲೇಬೇಕಿತ್ತು. ಸಹೋದರಿಯರೂ ಪ್ರಸನ್ನ I mean ಪ್ರಸೇನನ ಪ್ರೀತಿಯನ್ನು ಪುರಸ್ಕರಿಸುತ್ತಾರೆ ಆದರೆ ಒಂದು ಷರತ್ತಿನೊಂದಿಗೆ! ಶುಭವಂತಿ ಜಿನೇಶ್ವರನನ್ನೂ, ವಿನಂತಿ ಕೃಷ್ಣನನ್ನೂ ಪೂಜಿಸಲು ಪ್ರತ್ಯೇಕವಾಗಿ ಅನುವು ಮಾಡಿಕೊಟ್ಟಲ್ಲಿ ನಿಮ್ಮನ್ನು ಮದುವೆಯಾಗಲು ನಮಗಭ್ಯಂತರವಿಲ್ಲ, ನಮ್ಮಪ್ಪನೂ ಒಪ್ಪಿದರೆ ಎಂದು ಸಹೋದರಿಯರು ಮುಜುಗರದ ಮರೆಯಲ್ಲಿ ಒಪ್ಪಿಗೆ ಸೂಚಿಸುತ್ತಲೇ ಪ್ರಸೇನ ಊರಿಗೆಲ್ಲಾ ತೋರಣ ಬಿಗಿಯಲನುವಾಗುತ್ತಾನೆ. ಪ್ರತ್ಯೇಕ ಪೂಜಾ ಕೋಣೆಗಳಲ್ಲಿ ತಮ್ಮಿಷ್ಟದ ದೇವರುಗಳಿಗೆ ಪೂಜೆ ನೆರವೇರಿಸುವುದನ್ನು ಕಂಡ ಪ್ರಸೇನ ದೇವ 'ಸೋದರಿಯರ ಏಕತೆಯ ಕಂಡು ತೋಷದಿಂ.... ಪ್ರಸಂಗದ ಏಕೈಕ ಪೂರ್ಣ ಪ್ರಮಾಣದ ಭಾಮಿನಿಗೆ ತಲೆದೂಗುತ್ತಾನೆ:ಪ್ರೇಕ್ಷಕ ಸಂದೋಹವೂ! ಶಾಂತಿ-ಪ್ರೀತಿ, ಸಹಬಾಳ್ವೆಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎನ್ನುವುದನ್ನು ಅರಿತ ಪ್ರಸಂಗಕರ್ತೆ ಧರ್ಮ ಸಾಮರಸ್ಯದ ಮಹತಿಯನ್ನು ಪ್ರಚುರಪಡಿಸಲು ಒಂದೇ ಸೂರಿನಡಿ ವಾಸಿಸುವ ಈರ್ವರು ತಮ್ಮ ಇಷ್ಟಾನುಸಾರ ಭಿನ್ನ ಧರ್ಮಪಾಲನೆಗೆ ಅತ್ಯಂತ ಪೂರಕ ವಾತಾವರಣವನ್ನು ಸೃಷ್ಟಿಸಿಕೊಂಡು ಜಿನ-ಕೃಷ್ಣರನ್ನು ಆರಾಧಿಸುವ ಸನ್ನಿವೇಶವನ್ನು ಸೃಜಿಸಿರಬಹುದೆ?
ಪ್ರಸೇನ ದೇವ ತನ್ನ ಇಬ್ಬರು ಮಡದಿಯರಲ್ಲಿ ಹಿರಿಯಾಕೆ ಶುಭವಂತಿಯಲ್ಲಿ ಗಂಡು ಸಂತಾನವನ್ನು ಪಡೆದು ಸಕಲ ಸುಖೋಪಭೋಗಗಳಲ್ಲಿ ಮಿಂದೇಳುತ್ತಿರುವ ಸಂದರ್ಭದಲ್ಲೇ ವೈರಿ ಪಡೆಯು ದಾಳಿಯಿಟ್ಟು, ನಡುರಾತ್ರಿಯೇ ಕರ್ತವ್ಯದ ಕರೆಗೆ ಓಗೊಟ್ಟು ಪ್ರಸೇನ ಹೊರಡಲನುವಾದಾಗ ಮಡದಿ ಶುಭವಂತಿಯೂ ರಣಾಂಗಣಕ್ಕೆ ತಾನೂ ಬರುವೆನೆನ್ನುತ್ತಾಳೆ. ಸರಿ, ಕೈಗೂಸನ್ನು ತಂಗಿ ವಿನಂತಿಯ ಸುಪರ್ದಿಗೊಪ್ಪಿಸಿ ಲಗುಬಗೆಯಿಂದ ಯುದ್ಧಭೂಮಿಯನ್ನು ಪ್ರವೇಶಿಸುತ್ತಾರೆ ಪ್ರಸೇನ-ಶುಭವಂತಿ ಸತಿಪತಿಯರು ಅಪರಾತ್ರಿಯಲ್ಲಿ! 'ಅಳಿಲೊಂದು ಅರಳಿ ಮರವನ್ನು ಏರಿದಾಕ್ಷಣ ಅಳಿಲಿಗೆ ಅರಳಿ ಮರವನ್ನು ಅಲುಗಾಡಿಸಲು ಸಾಧ್ಯವೆ ಎಂದು ಎದುರಾಳಿಗೆ ತನ್ನ ಸ್ವಸಾಮರ್ಥ್ಯದ ಮೇಲಿನ ನಂಬಿಕೆಯಿಂದ ಜರಿಯುತ್ತಾನಾದರೂ ಪ್ರಸೇನದೇವ(ಪ್ರಸನ್ನ ಶೆಟ್ಟಿಗಾರ್ ಮಾತು, ನೃತ್ಯಾಭಿನಯದಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ) ಆತನಿಂದಲೇ ಹತನಾಗುತ್ತಾನೆ. ಕಣ್ಣೆದುರೇ ಗಂಡನ ಅಂತ್ಯವಾದರೂ ಧೃತಿಗೆಡದೆ ಶತ್ರುವನ್ನು ಹಿಮ್ಮೆಟ್ಟಿಸಿ ಗಂಡನ ಕಳೇಬರದೊಂದಿಗೆ ಶುಭವಂತಿ ಅರಮನೆಗೆ ಮರಳುವ ಹಾದಿಯಲ್ಲಿದ್ದರೆ, ಇತ್ತ ಅಂತಃಪುರದಲ್ಲಿರುವ ವಿನಂತಿ ತನ್ನ ಗಂಡ ತನಗಿಂತಲೂ ತನ್ನಕ್ಕನನ್ನೇ ಹೆಚ್ಚು ಪ್ರೀತಿಸುತ್ತಿರಬಹುದೆ? ತನ್ನನ್ನಾತ ನಗಣ್ಯಳನ್ನಾಗಿಸುತ್ತಿರಬಹುದೆ ಎಂದು ಮುಂತಾಗಿ ವಿಚಲಿತಳಾದಾಗ ಆಕೆಯ ಅಂತರಾತ್ಮ ಇಲ್ಲ ಹಾಗೇನೂ ಇಲ್ಲ, ನೀನು ಕಳವಳಪಡಬೇಕಾದುದೇನೂ ಇಲ್ಲ ಎಂದು ಆಕೆಯನ್ನು ಸಂತೈಸಿ ಸಮಾಧಾನಿಸುವುದು ಮತ್ತು ಈ ಅಂತರಾತ್ಮವೂ ಒಂದು ಪಾತ್ರವೇ ಆಗಿ ರಂಗಪ್ರವೇಶಿಸುವುದು ಆಧುನಿಕ ರಂಗಭೂಮಿಯ ಪರಿಕಲ್ಪನೆಯನ್ನು ಯಕ್ಷಗಾನ ರಂಗಭೂಮಿಯಲ್ಲೂ ಉಪಕ್ರಮಿಸಿದ ನಿರ್ದೇಶಕರ ಜಾಣ್ಮೆಯಂತೆ ಕಾಣುತ್ತದೆ.ಈಗ ಬಂದಾರು, ಇನ್ನೊಂದು ಅರೆಘಳಿಗೆಯಲ್ಲಿ ಬಂದಾರು ಎಂದು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದ ವಿನಂತಿಯ ಮನೆಯಂಗಳಕ್ಕೆ ಧಾವಿಸಿ ಬಂದ ರಥದ ಕುದುರೆಗಳ ಖುರಪುಟದ ಸದ್ದು,ಖುದ್ದು ಕಾದ ಸೀಸದಷ್ಟೇ ಬರಸಿಡಿಲಿನ ವಾರ್ತೆಯನ್ನು ಕಿವಿಗಡರಿಸಿತ್ತು. ವಿಜಯಶಾಲಿಗಳಾಗಿ ಬಂದವರಿಗೆ ಬೆಳಗಲೆಂದು ಸಿದ್ಧಪಡಿಸಿದ ಆರತಿ ತಟ್ಟೆಯ ಬೆಳಕು ಆರಿತ್ತು! ಪತಿ ಪ್ರಸೇನ ದೇವ ಇಹಲೋಕದ ಯಾತ್ರೆ ಮುಗಿಸಿದ್ದನ್ನು ಉಮ್ಮಳಿಸುತ್ತಿರುವ ದುಃಖದ ನಡುವಲ್ಲೇ ಅಕ್ಕ ಉಸುರುವಾಗ ತಂಗಿ ಒಂದೇಟಿಗೆ ಧರಾಶಾಹಿಯಾಗುವ ಬಾಳೆಮರದಂತೆ ಧರಾಶಾಹಿಯಾಗುತ್ತಾಳೆ. ಅರಮನೆಯ ತುಂಬೆಲ್ಲಾ ಶೋಕದ್ದೇ ಅನುರಣನ! ಇಲ್ಲಿ ಮತ್ತೊಮ್ಮೆ ಯಲಗುಪ್ಪ-ವಂಡಾರರ ಅಭಿನಯ ಪ್ರತಿಭೆಯ ವಿರಾಟ್ ದರ್ಶನ ವಾಗುತ್ತದೆ. ಗಂಡನಿಲ್ಲದ ತಾನು ಈ ಭುವಿಯಲ್ಲಿ ಬದುಕಲಾರೆ ಎನ್ನುತ್ತಲೇ ಸಹಗಮನಕ್ಕನುವಾಗುತ್ತಾಳೆ ವಿನಂತಿ. ಈ ಸಂದರ್ಭದಲ್ಲಿ ಭಾವಶೂನ್ಯಳಾಗಿ, ತುಂಬು ಮುತ್ತೈದೆಯ ಶೃಂಗಾರದೊಂದಿಗೆ ನಿರ್ಲಿಪ್ತತೆಯಿಂದ ಗಂಡನ ಚಿತೆಯೆಡೆಗೆ ನಡೆಯುವ ವಿನಂತಿಯಾಗಿ ವಂಡಾರು ಗೋವಿಂದರೊಳಗಿನ ಸಂವೇದನಾಶೀಲ ಕಲಾವಿದ ಪೂರ್ಣವಾಗಿ ಅಭಿವ್ಯಕ್ತಗೊಳ್ಳುತ್ತಾನೆ!(ಪೂರಕ ರಂಗಸ್ಥಳದಲ್ಲಿ ಸಹಗಮನದ ದೃಶ್ಯವನ್ನು ಬೆಳಕಿನ ಪರಿಣಾಮಕಾರಿ ಬಳಕೆಯಿಂದ ಇನ್ನಷ್ಟು ಸೊಗಸಾಗಿಸುವ ಸಾಧ್ಯತೆಯಿತ್ತು)
ಹೀಗೆ ಕಡು ವಿಷಾದದ ಮಡುವಿನಲ್ಲಿ ಪ್ರೇಕ್ಷಕ ಗಡಣ ಮುಳುಗಿರುವಾಗಲೆ ರಂಗದ ಮೇಲೆ ಮಿಂಚಿನ ಸಂಚಾರದಂತಹ ಜೋಡಿ ವೇಷಗಳು: ವಿಶ್ವನಾಥ ಹೆನ್ನಾಬೈಲು ಹಾಗೂ ಹರೀಶ ಜಪ್ತಿ. ಇಲ್ಲಿ ಕಥೆ ಮಗ್ಗುಲು ಬದಲಾಯಿಸುತ್ತದೆ. ಈ ಈರ್ವರು ತರುಣ ಕಲಾವಿದರು ಬಹುವಂಗಗಳಲ್ಲಿ ಪರಸ್ಪರರನ್ನು ಮೆಚ್ಚುವ ಭಾವಾಭಿನಯದಲ್ಲಿ ಹಠಕ್ಕೆ ಬಿದ್ದವರಂತೆ ರಂಗಸ್ಥಳದ ಬಿಸಿಯೇರಿಸುತ್ತಾರೆ. ತನಗೆ ಕವಿತೆ ಬರೆಯುವ ಒಲವಿದೆ. ಕವಿತೆಗಳ ಮೂಲಕ ತಾನೊಬ್ಬ ಉದ್ಧಾಮ ಕವಿಯಾಗಬೇಕು ಎನ್ನುವ ಹಂಬಲದ ಪನ್ನಗ ಸ್ಪೂರ್ತಿಗಾಗಿ ಪ್ರಕೃತಿ ಮಡಿಲಿಗೆ ಹೊರಟರೆ, ಅಲ್ಲಿ ಪ್ರಕೃತಿಯನ್ನೇ ನಾಚಿಸುವ ಕಾಂತಿ, ಕುಂತಿಯರೆಂಬ ಸ್ಫರದ್ರೂಪಿಯರು ಇದಿರಾಗುತ್ತಾರೆ. ಇವರನ್ನು ಇದಿರುಗೊಳ್ಳುವ ಪೂರ್ವದಲ್ಲಿ ಕಾಂತಿ, ಕುಂತಿಯರು ಪ್ರಾಕೃತಿಕ ಸೊಬಗನ್ನು ವರ್ಣಿಸುವ ನೃತ್ಯವೂ ಚೇತೋಹಾರಿಯಾಗಿತ್ತು. ನೃತ್ಯ ಚಲಿಸುವ ಕಾವ್ಯದಂತಹ ಪ್ರಸ್ತುತಿ ಅದು.ಈ ಪದ್ಯದಲ್ಲಿ ಸಮಶೃತಿಯ ಚಮತ್ಕಾರವನ್ನೂ ಹಿಮ್ಮೇಳದವರು ಸ್ಪುರಿಸಿದ್ದರಿಂದ ಪ್ರೇಕ್ಷಕನಿಗೆ ಹಬ್ಬ! ಕಾಂತಿ, ಕುಂತಿಯರ ಅನುಪಮ ಸೌಂದರ್ಯಾತಿಶಯಕ್ಕೆ ಮೂಕ ವಿಸ್ಮಿತರಾದ ಗೆಳೆಯರು ತರುಣಿಯರನ್ನು ಮಾತಿಗೆಳೆದರೆ ಅವರೀರ್ವರೂ ಮೂಕರು! ಪನ್ನಗ ಸ್ವರ ಸಂವೇದಿನಿ ರಾಗ ಹಾಡುವುದರೊಂದಿಗೆ ಕಾಂತಿ ಮಾತು ಪಡೆಯುತ್ತಾಳಾದರೂ ಸಖೇದಾಶ್ಚರ್ಯವೆನ್ನುವಂತೆ ಕುಂತಿ ಆ ಕ್ಷಣವೇ ಕುಸಿದುಬಿದ್ದು ಮರಣವನ್ನಪ್ಪುತ್ತಾಳೆ.
ಜಿನೋದಕ ಪ್ರೋಕ್ಷಣೆಯಿಂದ ಕುಂತಿ ಮರುಜೀವ ಪಡೆಯುವುದರೊಂದಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ. ಈ ಪ್ರಕ್ರಿಯೆಯ ನಡುವೆ ನಾಟಕೀಯ ತಿರುವುಗಳಲ್ಲಿ ಶುಭವಂತಿ ಮತ್ತೊಮ್ಮೆ ಖಡ್ಗ ಹಿಡಿಯಬೇಕಾಗುತ್ತದೆ. ಶುಭವಂತಿ ಅರಸೊತ್ತಿಗೆಯ ಉಳಿವಿಗಾಗಿ ಹೋರಾಡಿ ಜಯಿಸಿದ್ದನ್ನು ಸ್ಮರಣೀಯವಾಗಿಸಲು ಸ್ವರ್ಣಾಭಿಷೇಕಕ್ಕೆ ನಿಶ್ಚಯಿಸುತ್ತಾರಾದರೂ ಅದು ಯಾಕೋ ಪ್ರಸ್ತುತಗೊಳ್ಳಲೇ ಇಲ್ಲ(ಇದು ಕೂಡ ಆಖ್ಯಾನದ ಆಕರ್ಷಣೆಗಳಲ್ಲೊಂದು ಎಂದು ಪ್ರಚಾರ ಮಾಡಲಾಗಿತ್ತು)
ದಾನ, ತ್ಯಾಗವನ್ನೇ ಉಸಿರಾಗಿಸಿಕೊಂಡ ಸಹೋದರಿಯರನ್ನು ಕೇಂದ್ರವಾಗಿಸಿಕೊಂಡ ದಾನ ಚಿಂತಾಮಣಿ ಪ್ರಸಂಗವನ್ನು ಪ್ರಸಂಗಕರ್ತೆ, ನಿರ್ದೇಶಕರ ಆಶಯ ಭಂಗವಾಗದಂತೆ ಪ್ರಬುದ್ಧ ಕಲಾವಿದರು ಪರಿಶುದ್ಧ ಯಕ್ಷಗಾನವನ್ನಾಗಿಸಿದರು. ಬೆಳಕು ಹಾಗೂ ಧ್ವನಿಯ ನಿರ್ವಹಣೆಯಲ್ಲಿ ಇನ್ನೊಂಚೂರು ವೃತ್ತಿಪರತೆ ಬೇಕೆನಿಸಿತು. ಸಭಾಂಗಣದಲ್ಲೂ ರಂಗಸ್ಥಳವನ್ನು ರೂಪಿಸಿದ್ದು ಸಂಘಟಕರಿಗೆ ಯಕ್ಷಗಾನ ಕಲಾ ಪ್ರಕಾರದ ಕುರಿತಾದ ಶ್ರದ್ಧೆ, ಗೌರವದ ಪ್ರತೀಕ.ಪ್ರಸಂಗದಲ್ಲಿ ಬಳಸಲಾದ ದೇವರ ವಿಗ್ರಹಗಳನ್ನು 'ಯಕ್ಷಗಾನೀಯ'ವಾಗಿಸಿದ್ದರೆ ಚೆನ್ನಿತ್ತು. ಆಹಾರ್ಯ, ವೇಷಭೂಷಣಗಳ ಕುರಿತು ಮಾತಿಲ್ಲ.
ಪ್ರಸಂಗಕರ್ತೆ ಸ್ವತಃ ಹೆಣ್ಣಾಗಿಯೂ ಬಹುಪತ್ನಿತ್ವ, ಸಹಗಮನದಂತಹ, ಈ ಕಾಲಕ್ಕೊಲ್ಲದ ಆದರ್ಶಗಳನ್ನು ಮುನ್ನೆಲೆಯಲ್ಲಿ ಪ್ರದರ್ಶನಕ್ಕನುವು ಮಾಡಿಕೊಟ್ಟಿದ್ದು ಮತ್ತು ಅದೇ ಪ್ರಸಂಗದ ವಿಶೇಷ ಆಕರ್ಷಣೆ ಎಂದು ಬಿಂಬಿತವಾಗಿದ್ದು ಕವಿಯ ಸ್ವಾತಂತ್ರ್ಯದ ಹೊರತಾಗಿಯೂ ಕಥೆಯ ಕಾಲಘಟ್ಟ ಸ್ಪಷ್ಟವಿಲ್ಲದಿರುವಾಗ,
ಕಥೆಯೂ ಆ ಸನ್ನಿವೇಶಗಳನ್ನು ಬೇಡದಿರುವಾಗ ಎಷ್ಟರಮಟ್ಟಿಗೆ ಉಚಿತ ಎನ್ನುವ ಪ್ರಶ್ನೆ ಪ್ರದರ್ಶನದ ನಂತರ ಪ್ರೇಕ್ಷಕನನ್ನು ಕಾಡದಿರದು. ಪ್ರಸಂಗ ಪಾತ್ರಗಳು ಸಂದರ್ಭೋಚಿತವಾಗಿ ರಾಮಾಯಣ, ಮಹಾಭಾರತದ ಪಾತ್ರಗಳನ್ನು ಉದಾಹರಿಸುತ್ತಿದುದರಿಂದ ದಾನ ಚಿಂತಾಮಣಿಯ ಕಥೆ ರಾಮಾಯಣ, ಮಹಾಭಾರತದ ಕಾಲಘಟ್ಟದ್ದಂತೂ ಆಗಿರಲಿಕ್ಕಿಲ್ಲ. ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪರಂತಹ ಕಲಾವಿದ ಶುಭವಂತಿಯ ಪಾತ್ರ ಪೋಷಿಸಿದ್ದಾಗ್ಯೂ ಈ ಪಾತ್ರ ಅಭಿನಯ, ನೃತ್ಯಗಳಿಗೆ ಹೆಚ್ಚು scope ಇಲ್ಲದೆ ಪೇಲವ ಅನಿಸಿದ ಸಂದರ್ಭಗಳೂ ಪ್ರಸಂಗದಲ್ಲಿದ್ದವು. ಪಾತ್ರ ಸ್ವಭಾವತಃ ಗಂಭೀರ ಮತ್ತು ಪ್ರಧಾನವಾಗಿರುವ ಕಾರಣದಿಂದಲೂ ಈ ಅನಿವಾರ್ಯತೆ ಸೃಷ್ಟಿಯಾಗಿರಬಹುದೇನೋ.
ದಾನ ಚಿಂತಾಮಣಿಯನ್ನು ಆಡಿಸಿದ ಹಿಮ್ಮೇಳಕ್ಕೆ ಪೂರ್ಣ ಅಂಕಗಳು. ಪ್ರಸಂಗ ಸಾಹಿತ್ಯದಲ್ಲಿನ ಬನಿ ಮತ್ತು ಆ ಸಾಹಿತ್ಯವನ್ನು ಬೇಗಡೆ, ಹಿಂದೋಳ, ಶಂಕರಾಭರಣಗಳಲ್ಲಿ ವಿಸ್ತಾರಗೊಳಿಸಿದ್ದು ಸುಶ್ರಾವ್ಯವಾಗಿತ್ತು.ಅನವಶ್ಯಕ ಆವರ್ತನ,ಆಲಾಪಗಳಿಲ್ಲದಿರುವುದೂ ಭಾಗವತದ್ವಯರ ಹೆಚ್ಚುಗಾರಿಕೆ.'ದೊಡ್ಡ ಭಾಗವತರು'ಗಳಿಗೆ ಎಲ್ಲಿಯೂ ತೊಡಕಾಗದಂತೆ ಚಂಡೆ, ಮದ್ದಳೆಯ ಸಾಥ್ ನೀಡಿದ ಕಲಾವಿದರುಗಳೂ ಅಭಿನಂದನಾರ್ಹರು. ಪೋಷಕ ಕಲಾವಿದರುಗಳು ಕೂಡ ಪ್ರದರ್ಶನದ ಒಟ್ಟಂದಕ್ಕೆ ಪೂರಕವಾಗಿ ಸ್ಪಂದಿಸಿದ್ದರು.ಹಾಸ್ಯ ಕಲಾವಿದರದ್ದು really good try.ಮಳೆಗಾಲದ ಆರಂಭದಲ್ಲೇ ಬ್ರಹ್ಮಾವರ ಕೇಂದ್ರಿತ ಪರಿಸರದ ಯಕ್ಷಗಾನಾಸಕ್ತರಿಗೆ ಮನರಂಜನೆಯ ಸೋನೆ ಸುರಿಸಿದ #ವಂಡಾರಿನ #ನಾದ_ನೂಪುರ_ಯಕ್ಷೋತ್ಥಾನ_ಟ್ರಸ್ಟ್ ಮೆಚ್ಚುಗೆ.
#ಉದಯ ಶೆಟ್ಟಿ, ಪಡುಕರೆ
*****15037
ಈ ಪ್ರಸಂಗದ ಪ್ರದರ್ಶನ ಬೇಕಾದಲ್ಲಿ ಸಂಪರ್ಕಿಸಿ - 8277560171
#Moodubelle_Chandrakanth_Rao
#Hennabail_Vishwanath_Poojari
#sudheer_uppoor
#Hareesh_Japthi
#Nagaraj_Devalkunda
#Vijay_Muddumane
#Uday_Padukere

ಇತಿಹಾಸದ ಪುಟಗಳಲ್ಲಿ ದುರಂತ ಕಂಡ ಬೆಳ್ಮಣ್ಣು ಮೇಳ -ಮೇಳ ದರ್ಪಣ ಸಂಚಿಕೆ-೦೫


ಇತಿಹಾಸದ ಪುಟಗಳಲ್ಲಿ ದುರಂತ ಕಂಡ ಬೆಳ್ಮಣ್ಣು ಮೇಳ -ಮೇಳ ದರ್ಪಣ ಸಂಚಿಕೆ-೦೫
ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಯಕ್ಷಗಾನ ಇತಿಹಾಸದಲ್ಲಿ ವಿಷಾದದ ದಾಖಲೆ ಬರೆದ ಮೇಳ. ಒಂದರ್ಥದಲ್ಲಿ, ದುರಂತದಲ್ಲಿ ಅಂತ್ಯ ಕಂಡ ಮೇಳ ಎನ್ನಬಹುದು. ಬಹುಶಃ ಯಕ್ಷಗಾನ ಡೇರೆ ಮೇಳಗಳ ಇತಿಹಾಸದಲ್ಲಿ ಅತ್ಯಂತ ಸಣ್ಣ ತಿರುಗಾಟದಲ್ಲೇ ಮೇಳವು ಕೊನೆಗಂಡ ದಾಖಲೆ ಬೆಳ್ಮಣ್ಣು ಮೇಳದ್ದೇ ಇರಬಹುದು. ತಿರುಗಾಟ ನಡೆಸಿದ ಪ್ರಥಮ ವರ್ಷದಲ್ಲೇ ದುರಂತಕ್ಕೊಳಗಾಗಿ ಬೆಳ್ಮಣ್ಣು ಮೇಳ ಕೊನೆಗೊಂಡುದು ವಿಷಾದನೀಯ.
ಬೆಳ್ಮಣ್ಣು ಮೇಳದ ಸ್ಥಾಪಕರಾದ ಬೆಳ್ಮಣ್ಣು ಶೇಖರ ವಿ.ಶೆಟ್ಟಿಯವರು ಮುಂಬೈಯಲ್ಲಿ, ಪ್ರತಿಷ್ಠಿತ ಅ.ಂ ಪದವಿ ಪೂರೈಸಿ ಚಾರ್ಟರ್ಡ್ ಎಕೌಂಟೆAಟ್ ಆಗಿ ಉನ್ನತ ಉದ್ಯೋಗದಲ್ಲಿದ್ದರು. ಶೇಖರ ಶೆಟ್ಟರು ಅಜಾನುಬಾಹು ಶರೀರದೊಂದಿಗೆ, ಆಕರ್ಷಕ ಗುಂಗುರು ಕೂದಲನ್ನು ಹೊಂದಿರುವ ಸಜ್ಜನ ವ್ಯಕ್ತಿ. ಅವರಿಗೆ ಯಕ್ಷಗಾನದತ್ತ ಅಪಾರ ಪ್ರೇಮ, ಒಲವು ಬಾಲ್ಯದಲ್ಲೇ ಇದ್ದ ಕಾರಣ, ದೂರದ ಮುಂಬೈನಲ್ಲಿದ್ದರೂ, ಯಕ್ಷಗಾನೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹಲವಾರು ಯಕ್ಷಗಾನ ಪ್ರಸಂಗ ರಚಿಸಿದ್ದಲ್ಲದೇ, ಮುಂಬೈನ ಪ್ರಸಿದ್ಧ ಗೀತಾಂಬಿಕ ಯಕ್ಷಗಾನ ಮಂಡಳಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ವೇಷವನ್ನೂ ಮಾಡುತ್ತಿದ್ದರು. ನಂತರದಲ್ಲಿ ತಾವೇ ಮೇಳ ಹೊರಡಿಸುವ ಯೋಜನೆ ಹೊಂದಿ, ೧೯೮೪ರಲ್ಲಿ, ಸ್ಥಗಿತಗೊಂಡ, ಬಪ್ಪನಾಡು ಮೇಳವನ್ನು ಮಗದೊಮ್ಮೆ ಭರ್ಜರಿಯಾಗಿ ಹೊರಡಿಸಿದರು. ಮಲ್ಪೆ ರಾಮದಾಸ ಸಾಮಗ, ಕೊಳ್ಯೂರು ರಾಮಚಂದ್ರ ರಾವ್, ಪೆರುವಾಯಿ ನಾರಾಯಣ ಶೆಟ್ಟಿ, ಕುಬಣೂರು ಶ್ರೀಧರ್ ರಾವ್, ಸಿದ್ದಕಟ್ಟೆ ಕೊರಗದಾಸ್, ಸರಪಾಡಿ ಅಶೋಕ ಶೆಟ್ಟಿ, ರಾಧಾಕೃಷ್ಣ ನಾವುಡ, ತಾರಾನಾಥ ವರ್ಕಾಡಿ, ಮಾಡಾವು ಕೊರಗಪ್ಪ ರೈ ಮುಂತಾದ ಯಕ್ಷಗಾನ ಘಟಾನುಘಟಿಗಳ ಗಡಣವನ್ನೇ ಹೊಂದಿ ಬಪ್ಪನಾಡು ಮೇಳ ಅಪಾರ ಜನಪ್ರಿಯತೆ ಗಳಿಸಿತು. ಶೆಟ್ಟರೇ ರಚಿಸಿದ "ಬಂಗಾರ್ದ ತೊಟ್ಟಿಲ್" ಪ್ರಸಂಗ ಯಶಸ್ವಿಯಾಗಿತ್ತು. ಎರಡು ವರ್ಷಗಳ ನಂತರ, ಏನೋ ಸಮಸ್ಯೆ ಇದ್ದಿರಬೇಕು. ಬಪ್ಪನಾಡು ಮೇಳವನ್ನು ತೊರೆದು, ತಮ್ಮದೇ ಊರಿನ ಬೆಳ್ಮಣ್ಣು ಮೇಳವನ್ನು ಸುಸಜ್ಜಿತವಾಗಿ ಹೊರಡಿಸಲು ಯೋಚಿಸಿ, ನವೆಂಬರ್ ೭, ೧೯೮೬ರಂದು ಹೊಸ ಬೆಳ್ಮಣ್ಣು ಮೇಳದ ತಿರುಗಾಟ ಆರಂಭಿಸಿದರು. ಶೇಖರ ಶೆಟ್ಟರು ಬೆಳ್ಮಣ್ಣು ಮೇಳವನ್ನು ಸುಸಜ್ಜಿತವಾಗಿಯೇ ಪ್ರಾರಂಭಿಸಿದರು. ೦೭.೧೧.೧೯೮೬ರಂದು ಪ್ರಥಮ ಸೇವೆಯಾಟ ಮಾಡಿ ಹೊಸ ಡೇರೆ, ಹೊಸ ರಂಗಸ್ಥಳ, ವಾಹನ ಸೌಕರ್ಯ, ಉತ್ತಮ ಕಲಾವಿದರ ಸಂಯೋಜನೆಯೊAದಿಗೆ ಉತ್ತಮ ಪ್ರಸಂಗವನ್ನೂ ಪ್ರದರ್ಶಿಸಿದರು. ಶೇಖರ ಶೆಟ್ಟರಿಗೆ ಯಕ್ಷಗಾನ ಪ್ರೇಕ್ಷಕರನ್ನು ಆಕರ್ಷಿಸುವ ಅದ್ಭುತ ಕಲೆ ಕರಗತವಾಗಿತ್ತು. ಬೆಳ್ಮಣ್ಣು ಮೇಳ ಹೊರಡುವ ಮೊದಲೇ, ಶೇಖರ ಶೆಟ್ಟರ ಪ್ರಚಾರ ಶೈಲಿಯು ಅಂದಿನ ಕಾಲದಲ್ಲಿ ಸಂಚಲನ ಮೂಡಿಸಿತ್ತು. ಉದಯವಾಣಿ ಹಾಗೂ ಇನ್ನಿತರ ಕರಾವಳಿಯ ಪತ್ರಿಕೆಗಳಲ್ಲಿ ದಿನಂಪ್ರತಿ "ಬೆಳ್ಮಣ್ಣು ಮೇಳ, ಬೆಳ್ಮಣ್ಣು ಮೇಳ, ಬೆಳ್ಮಣ್ಣು ಮೇಳ" ಶೀರ್ಷಿಕೆಯಲ್ಲಿ ಜಾಹೀರಾತು ನೀಡಿ, ಯಕ್ಷಗಾನ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಲು ಯಶಸ್ವಿಯಾಗಿದ್ದರು. ಅಂದಿನ ತಿರುಗಾಟದಲ್ಲಿ ಮರವಂತೆ ನರಸಿಂಹದಾಸ್, ಮೋಹನ ಬೈಪಡಿತ್ತಾಯ, ಅಡೂರು ಮೋಹನ ಸರಳಾಯ, ಸರಪಾಡಿ ಅಶೋಕ ಶೆಟ್ಟಿ, ಮಾಡಾವು ಕೊರಗಪ್ಪ ರೈ, ಪದ್ಮನಾಭ ರೈ, ಆನೆಕಲ್ಲು ಗಣಪತಿ ಭಟ್,
ದಾಸಪ್ಪ ಗೌಡ, ಬೆಳ್ಮಣ್ಣು ಹರಿದಾಸ ಉಡುಪ, ಸ್ತ್ರೀ ಪಾತ್ರದಲ್ಲಿ ಮಂಬೈನ ಶ್ರೀನಿವಾಸ ಶೆಟ್ಟಿ, ಉಮೇಶ್ ಶೆಟ್ಟಿ, ಪೊಳಲಿ ಲೋಕಯ್ಯ, ಪರಮೇಶ್ವರ ಆಚಾರ್ಯ ಇದ್ದರು. ಶಂಕರ್ ಶೆಟ್ಟಿ ಮುಂಬೈ, ಕಾರ್ಕಳ ನಾರಾಯಣ ಶೆಟ್ಟಿ, ಅಪ್ಪುಕುಂಞ ಯಾದವ, ಸರಪಾಡಿ ವಿಠಲ ಶೆಟ್ಟಿ, ಬಾಲಕೃಷ್ಣ ಮಣಿಯಾಣಿ, ಶ್ರೀನಿವಾಸ ಹಾಸ್ಯಗಾರ, ಮಹಾಬಲೇಶ್ವರ ಭಟ್, ಸಜಿಪ ಮೋನಪ್ಪ ಶೆಟ್ಟಿ, ಕೇಶವ ಶೆಟ್ಟಿಗಾರ್, ಕುಂಬಳೆ ಪಿಲಿಫ್ ಡಿಸೋಜ, ಮುಂತಾದ ಕಲಾವಿದರಿದ್ದರು. ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಕು. ರಾಜೇಶ್ವರಿ ಹಾಗೂ ಕು.ವಸಂತಿಯವರ ಭರತ ನಾಟ್ಯ, ಮಹಿಳಾ ಭಾಗವತರಾಗಿ ಕು.ಮೋಹಿನಿ ಭಟ್, ಮದ್ದಲೆ ವಾದಕರಾಗಿ ಕು.ವಿಜಯಾ ಭಟ್(ಇವರೀರ್ವರೂ ಆನೆಕಲ್ಲು ಗಣಪತಿ ಭಟ್ಟರ ಸೋದರಿಯರು) ಪೂರ್ಣಾವಧಿಯಲ್ಲಿ ಕಲಾವಿದರಾಗಿದ್ದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ಸುರೇಂದ್ರ ಪಣಿಯೂರರು ಅತಿಥಿ ಭಾಗವತರಾಗಿಯೂ ಭಾಗವಹಿಸಿದ್ದರು. ಶೆಟ್ಟರು ಕಲಾವಿದರಿಗೆ ಮಾಮೂಲಿಗಿಂತಲೂ ಹೆಚ್ಚಿನದ್ದೇ ಆದ ಸಂಭಾವನೆ ನೀಡಿದ್ದರು ಎಂದು ಅಂದು ಬೆಳ್ಮಣ್ಣು ಮೇಳದಲ್ಲಿ ತಿರುಗಾಟ ನಡೆಸಿದ ಸರಪಾಡಿ ಅಶೋಕ ಶೆಟ್ಟರು ಇಂದಿಗೂ ನೆನಪಿಸುತ್ತಿದ್ದಾರೆ. ಆ ತಿರುಗಾಟದ ಪ್ರಧಾನ ಪ್ರಸಂಗ ಶೇಖರ ಶೆಟ್ಟರೇ ರಚಿಸಿದ "ಮಾಮಿ ಪದ್ದಕ್ಕೆ". ಈ ಪ್ರಸಂಗವು ಶೇಖರ ಶೆಟ್ಟರದ್ದೇ ಕಥೆಯನ್ನು ಹೊಂದಿರುವ ಪ್ರಸಂಗ ಎಂಬುದಾಗಿ ಅಂದಿನ ಕಾಲದಲ್ಲಿ ವದಂತಿಯಿತ್ತು.
ಕಥಾನಾಯಕನ ಹೆಸರೂ ಚಂದ್ರಶೇಖರ ಎಂಬುದಾಗಿದ್ದು, ಈ ಪಾತ್ರವನ್ನು ಶೇಖರ ಶೆಟ್ಟರೇ ನಿರ್ವಹಿಸುತ್ತಿದ್ದರು. ಈ ಪ್ರಸಂಗವು ಅಂದು ಯಶಸ್ವಿಯಾಗಿ ಪ್ರದರ್ಶನ ನೀಡಿತ್ತು. ಹಲವಾರು ಕಡೆಗಳಲ್ಲಿ ತುಂಬಿದ ಡೇರೆಯೊಂದಿಗೆ ಪ್ರದರ್ಶನ ಕಂಡು, ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿತು. ಕಾಂತು ಕಬೇದಿ, ರಕ್ಷಾಬಂಧನ, ಮುತೈದಿ ನಾಗೆತ್ತಿ ಪ್ರಸಂಗಳೂ ಇದ್ದವು.
ಆದರೆ, ತಿರುಗಾಟ ಮುಗಿಯಲು ೫ ದಿನಗಳಷ್ಟೇ ಉಳಿದಿರುವ ಸಂದರ್ಭದಲ್ಲಿ (೨೨.೦೫.೧೯೮೭ ರಂದು ಮೇಳದ ಕೊನೆಯ ಸೇವೆಯಾಟ ಎಂದು ಶೇಖರ ಶೆಟ್ಟರು ನನ್ನಲ್ಲಿ ತಿಳಿಸಿದ್ದರು) ಬೆಳ್ಮಣ್ಣು ಮೇಳವು ಅತ್ಯಂತ ದಾರುಣವಾದ ಘಟನೆಗೊಳಗಾಯಿತು. ಅಂದು ೧೭.೦೫.೧೯೮೭ರ ದಿನಾಂಕ, ಬೆಳ್ಮಣ್ಣು ಮೇಳಕ್ಕೆ ಕರಾಳ ದಿನವಾಗಿ ಕಾಡಿತು. ಅಂದು ಮಂಗಳೂರು ಉರ್ವಸ್ಟೋರ್ ನಲ್ಲಿ ಪ್ರದರ್ಶನ ನೀಡಬೇಕಾಗಿತ್ತು. ಅಂದಿನ ಪ್ರದರ್ಶನದಲ್ಲಿ ಶೇಖರ ಶೆಟ್ಟರಿಗೆ ಸಂಘಟಕರಿAದ ಹಾಗೂ ಅಭಿಮಾನಿಗಳಿಂದ ಸಂಮಾನವೂ ಜರುಗಲಿತ್ತು. ಮೊದಲ ದಿನ ಕಾರ್ಕಳ ಸಮೀಪದ ಸಾಣೂರಿನಲ್ಲಿ ಯಶಸ್ವಿಯಾಗಿ ಪ್ರದರ್ಶನ ಮುಗಿಸಿ ಕಲಾವಿದರೆಲ್ಲರೂ ಮೇಳದ ಟೆಂಪೋದಲ್ಲಿ ಕುಳಿತು ಮಂಗಳೂರಿನ ಕಡೆ ಸಾಗಿದರು. ವಾಹನ ಚಾಲಕರಾಗಿ ಸ್ವತಃ ಶೇಖರ ಶೆಟ್ಟರೇ ಇದ್ದರು. (ಸಾಮಾನ್ಯವಾಗಿ ಶೇಖರ ಶೆಟ್ಟರೇ ವಾಹನ ಚಲಾಯಿಸುತ್ತಿದ್ದರು) ಮೂಡುಬಿದಿರೆಯಲ್ಲಿ ಟೆಂಪೋ ನಿಲ್ಲಿಸಿ, ಹೊಟೇಲ್ ನಲ್ಲಿ ಎಲ್ಲರೂ ಕಾಫಿ ತಿಂಡಿ ಮುಗಿಸಿ ಮುಂದೆ ಸಾಗಿದರು. ನಂತೂರ್ ಕ್ರಾಸ್ ನಿಂದ ಉರ್ವಸ್ಟೋರ್ ಗೆ ವಾಹನ ಸಾಗುತ್ತಿತ್ತು. ಕೆಪಿಟಿ ಕಾಲೇಜು ದಾಟಿ ಮುಂದೆ ಸಾಗುತ್ತಿರುವಾಗ, ದುರ್ವಿಧಿಯೋ ಏನೋ, ದೊಡ್ಡ ದುರಂತವೇ ನಡೆದು ಹೋಯಿತು. ವಾಹನವು ಸುಮಾರು ೬೦ ಅಡಿಗಳ ಪ್ರಪಾತಕ್ಕೆ ಬಿತ್ತು. ಕೂಡಲೇ, ಸನಿಹದಲ್ಲಿ ಇದ್ದವರು ಸೇರಿ, ಎಲ್ಲಾ ಕಲಾವಿದರನ್ನು ಮೇಲಕ್ಕೆ ತರಲು ಸಹಕರಿಸಿದರು. ಎಲ್ಲಾ ಕಲಾವಿದರನ್ನೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಶೇಖರ ಶೆಟ್ಟರು, ಪ್ರಜ್ಞಾಹೀನರಾಗಿ ಗಂಭೀರವಾದ ಸ್ಥಿತಿಯಲ್ಲಿದ್ದರು. ನಂತರ ಅವರನ್ನು ಮಂಗಳೂರು ನರ್ಸಿಂಗ್ ಹೋಂ ಆಸ್ಪತ್ರೆಗೆ ದಾಖಲಿಸಿದರೂ, ಮರುದಿನ ಮುಂಜಾನೆ ಅಸುನೀಗಿದರು. ನಂತರದಲ್ಲಿ, ಇನ್ನೂ ಇಬ್ಬರು ನಿಧನರಾದರು. ಎಲ್ಲಾ ಕಲಾವಿದರಿಗೂ ಗಂಭಿರವಾದ ಗಾಯಗಳಾಗಿತ್ತು. ಅಂದು ಬೆಳ್ಮಣ್ಣು ಮೇಳದ ಭಾಗವತರಾಗಿದ್ದ, ಇದೀಗ, ಯಕ್ಷಗುರುಗಳಾಗಿರುವ ಮೋಹನ ಬೈಪಡಿತ್ತಾಯರು ಮೂರು ವರ್ಷಗಳ ಕಾಲ ಮಲಗಿದ್ದಲ್ಲೇ ಇದ್ದವರು, ಇಂದಿಗೂ, ಕಾಲಿಗೆ ಆದ ಗಂಭೀರ ಪೆಟ್ಟಿನಿಂದಾಗಿ ಕುಳಿತುಕೊಳ್ಳಲು ಆಗದ ಸ್ಥಿತಿಯಲ್ಲೇ ಇದ್ದಾರೆ. ಅಂದು, ವಾಹನದಲ್ಲಿ ಇದ್ದ ಕಲಾವಿದರಲ್ಲಿ ಆನೆಕಲ್ಲು ಗಣಪತಿ ಭಟ್, ಸರಪಾಡಿ ಅಶೋಕ ಶೆಟ್ಟಿ, ಮಾಡಾವು ಕೊರಗಪ್ಪ ರೈ, ಅಪ್ಪುಕುಂಞ ಯಾದವ, ಬಾಲಕೃಷ್ಣ ಮಣಿಯಾಣಿ ಹಾಗೂ ಸರಪಾಡಿ ವಿಠ್ಠಲ ಶೆಟ್ಟಿ ಹೊರತು ಪಡಿಸಿದರೆ, ಉಳಿದವರೆಲ್ಲರೂ ಯಕ್ಷಗಾನದ ತಿರುಗಾಟದಿಂದ ವಿಮುಖರಾಗಿದ್ದಾರೆ ಎಂಬುದು ಅತ್ಯಂತ ಬೇಸರದ ವಿಷಯ. ಬೆಳ್ಮಣ್ಣು ಮೇಳವು ಅಪಘಾತವಾದ ಸಂದರ್ಭದಲ್ಲಿ ನಾನು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದೆ . ಬೆಳ್ಮಣ್ಣು ಶೇಖರ ಶೆಟ್ಟರು ನನ್ನಲ್ಲಿ ತುಂಬಾ ಆತ್ಮೀಯತೆ ಹೊಂದಿದ್ದರು. ಅಜಾನುಬಾಹು ಶರೀರದವರಾದರೂ, ಸರಳ, ಸಜ್ಜನಿಕೆಯ ವ್ಯಕ್ತಿ. ಯಕ್ಷಗಾನ ವಲಯದಲ್ಲಿ ಎಲ್ಲರೊಂದಿಗೂ ಬೆರೆಯುವ ಸ್ವಭಾವದವರು. ನನ್ನ ಮಿತ್ರರಾದ ಯಶವಂತ ಶೆಟ್ಟರು ನನಗೆ ಫೋನ್ ಮೂಲಕ ಅಪಘಾತದ ವಿಷಯ ತಿಳಿಸಿದಾಗ, ನಾನು ಕೂಡಲೇ ರಜೆ ಹಾಕಿ ವೆನ್ಲಾಕ್ ಆಸ್ಪತ್ರೆಗೆ ತೆರಳಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ, ಹೆಚ್ಚಿನ ಕಲಾವಿದರನ್ನು ನೆಲದಲ್ಲೇ ಮಲಗಿಸಿದ್ದರು. ಪ್ರಜ್ಞಾಹೀನರಾಗಿದ್ದ ಶೇಖರ ಶೆಟ್ಟರನ್ನು ಒಂದು ಬೆಡ್ ನಲ್ಲಿ ಮಲಗಿಸಿದ್ದರು. ನೋವಿನಿಂದಾಗಿ ತುಂಬಾ ನರಳುತ್ತಿದ್ದರು. ಅವರು ಕೈಕಾಲುಗಳನ್ನು ಅಲುಗಾಡಿಸುತ್ತಿದ್ದ ಕಾರಣ, ಅವರ ಕೈ ಕಾಲುಗಳನ್ನು ಮಂಚಕ್ಕೆ ಕಟ್ಟಿ ಹಾಕಿದ್ದರು. ತೀವ್ರ ಗಾಯಗೊಂಡಿದ್ದ ಪದ್ಮನಾಭ ರೈ ಹಾಗೂ ದಾಸಪ್ಪ ಗೌಡರನ್ನು ಎಮರ್ಜೆನ್ಸಿ ಕೊಠಡಿಯಲ್ಲಿ ಮಲಗಿಸಿದ್ದರು. ಪದ್ಮನಾಭ ರೈಯವರು, ನಂತರದಲ್ಲಿ ನಿಧನ ಹೊಂದಿದ ದಾರುಣ ವಾರ್ತೆ ಬಂತು. ತೀವ್ರ ಗಾಯಗೊಂಡಿದ್ದ ನಾಲ್ವರು ಮಹಿಳಾ ಕಲಾವಿದರು, ಸರಪಾಡಿ ಅಶೋಕ ಶೆಟ್ಟಿ ಹಾಗೂ ಮಾಡಾವು ಕೊರಗಪ್ಪ ರೈಯವರನ್ನು ನಾನು, ಯಶವಂತ ಶೆಟ್ಟಿ ಹಾಗೂ ಸರಪಾಡಿಯ ಪುರುಷೋತ್ತಮ ಪೂಜಾರಿ ಸೇರಿ ಕಂಕನಾಡಿ ಆಸ್ಪತ್ರೆಗೆ ಶಿಫ್ಟ್ ಮಾಡಿದೆವು. ಉಳಿದ ಕಲಾವಿದರನ್ನು ಶಿಫ್ಟ್ ಮಾಡಲು ವೆನ್ಲಾಕ್ ಆಸ್ಪತ್ರೆಯ ವೈದ್ಯರು ಒಪ್ಪದ ಕಾರಣ, ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಬೇಕಾಯಿತು. ಕಂಕನಾಡಿಗೆ ದಾಖಲಿಸಿದ ಕಲಾವಿದರ
ಬಿಲ್ ಇದ್ದ ಔಷದದ ಮೊತ್ತವನ್ನು ಶ್ರೀ ಹರಿಕೃಷ್ಣ ಪುನರೂರು ನೀಡಿ ಸಹಕರಿಸಿದರೆ, ಉಳಿದ ಎಲ್ಲಾ ವೆಚ್ಚವನ್ನು ನಾನೇ ಭರಿಸಿದೆ. ಕಲಾವಿದರು ಡಿಸ್ಚಾರ್ಜ್ ಆಗುವವರೆಗೆ ನಾನು, ಯಶವಂತ ಶೆಟ್ಟಿ ಮತ್ತು ಪುರುಷೋತ್ತಮ ಪೂಜಾರಿಯವರು ಆಸ್ಪತ್ರೆಯಲ್ಲೇ ಉಳಕೊಳ್ಳಬೇಕಾಯಿತು. ಶೇಖರ ಶೆಟ್ಟರು ನಿಧನರಾಗಿ ಅವರ ಪಾರ್ಥಿವ ಶರೀರವನ್ನು ಬೆಳ್ಮಣ್ಣಿಗೆ ಕೊಂಡು ಹೋದರು. ಇದಾವುದೂ ಅರಿಯದ ಅವರ ಧರ್ಮಪತ್ನಿ ಮುಂಬೈನಿAದ ೧೧ ಘಂಟಗೆ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಬಂದರು. ನನ್ನಲ್ಲಿ, "ಅವರು ಹೇಗಿದ್ದಾರೆ, ಈಗ ಎಲ್ಲಿ ಇದ್ದಾರೆ?" ಎಂದು ಪ್ರಶ್ನಿಸಿದಾಗ, ನನಗೆ ಅತ್ಯಂತ ವೇದನೆಯಾಯಿತು. ಏನು ಹೇಳುವುದು? ಸತ್ಯವನ್ನೋ ಅಥವಾ ಸುಳ್ಳನ್ನೋ ಎಂಬ ಜಿಜ್ಞಾಸೆ ನನ್ನನ್ನು ಕಾಡಿತು. ಕೊನೆಗೆ ಧೈರ್ಯವಾಗಿ "ಬೆಳ್ಮಣ್ಣಿಗೆ ಕೊಂಡು ಹೋದರು" ಎಂದಷ್ಟೇ ಹೇಳಿ, ಅವರಿಗೆ ಕಾಣದಂತೆ ತುಂಬಿದ ಕಣ್ಣೀರು ಒರೆಸಿದೆ. ಬೆಳ್ಮಣ್ಣು ಶೇಖರ ವಿ ಶೆಟ್ಟರಿಂದ ತುಂಬಾ ನಿರೀಕ್ಷೆಯೊಂದಿಗೆ ಆರಂಭಗೊAಡ ಬೆಳ್ಮಣ್ಣು ಮೇಳವು ದುರಂತದಲ್ಲೇ ಅಂತ್ಯಗೊAಡದ್ದು ಅತ್ಯಂತ ಬೇಸರದ ವಿಷಯ. ನಿಧನ ಹೊಂದುವ ಕಾಲಕ್ಕೆ ಶೆಟ್ಟರಿಗೆ ಕೇವಲ ೩೩ ವರ್ಷ ವಯಸ್ಸಾಗಿತ್ತು. ಉತ್ತಮ
ಬದುಕನ್ನು ಸಾಗಿಸಬಹುದಾಗಿದ್ದು, ಯಕ್ಷಗಾನದ ಸೆಳೆತಕ್ಕೆ ಒಳಗಾಗಿ ಉತ್ತಮ ನೌಕರಿ ತ್ಯಜಿಸಿ, ಯಕ್ಷಗಾನದತ್ತ ಹೊರಳಿದ ಶೇಖರ ಶೆಟ್ಟರ ದುರಂತ ನಿಧನವು ಯಕ್ಷಗಾನಕ್ಕೆ ದೊಡ್ಡ ನಷ್ಟವೂ ಹೌದು.
ಲೇಖಕರು- ಎಂ.ಶಾAತರಾಮ ಕುಡ್ವ, ಮೂಡುಬಿದಿರೆ (ಪೂರಕ ಮಾಹಿತಿ: ಸರಪಾಡಿ ಅಶೋಕ ಶೆಟ್ಟಿ)
#Nadanoopura_Yakshothana_Trust-Nada noopura Yakshothana Trust Vandaru ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್
Like
Comment
Share

ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ - ಬೇಗಾರ್ ಪದ್ಮನಾಭ ಶೆಟ್ಟಿಗಾರ್


ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ - ಬೇಗಾರ್ ಪದ್ಮನಾಭ ಶೆಟ್ಟಿಗಾರ್
ಬಡಗುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಕಲಾವಿದರಲ್ಲಿ ಅಗ್ರಮಾನ್ಯ ಹೆಸರು ಬೇಗಾರು ಪದ್ಮನಾಭ ಶೆಟ್ಟಿಗಾರರದ್ದು. ಎಲೆಮರೆಯ ಕಾಯಿಯಾಗಿ ದೀರ್ಘ ಕಾಲ ಕಲಾಸೇವೆ ಮಾಡಿದ ಇವರಿಗೆ ಈಗ ೭೦ರ ಹರೆಯ..
ಬಡಗುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಲೆನಾಡ ಕಲಾವಿದರ ಕೊಡುಗೆ ಅಪಾರ. ಶೃಂಗೇರಿ, ತೀರ್ಥಹಳ್ಳಿ, ಬೇಗಾರು, ನಗರ, ಹೊಸನಗರ ಮುಂತಾದ ಪ್ರಾಂತ್ಯದ ಕಲಾವಿದರು ಯಕ್ಷಗಾನದ ತೆಂಕು, ಬಡಗಿನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಎರಡನೇ ವೇಷಧಾರಿ ದಿ.ನಗರ ಜಗನ್ನಾಥ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ
ದಿ.ನೆಲ್ಲೂರು ಮರಿಯಪ್ಪ ಆಚಾರ್, ದಿ.ಶೃಂಗೇರಿ ಭಾಸ್ಕರ ಶೆಟ್ಟಿ, ತೆಂಕು ಬಡಗಿನ ಸವ್ಯಸಾಚಿ ಸ್ತ್ರೀ ವೇಷಧಾರಿ ಎಮ್.ಕೆ. ರಮೇಶಾಚಾರ್, ಖ್ಯಾತ ಪುಂಡು ವೇಷಧಾರಿ ತೀರ್ಥಹಳ್ಳಿ ಗೋಪಾಲಾಚಾರ್, ಕಿಗ್ಗ ಹಿರಿಯಣ್ಣಾಚಾರ್, ಬೇಗಾರ್ ಶಿವಕುಮಾರ್, ತೀರ್ಥಹಳ್ಳಿ ಚಂದ್ರಾಚಾರ್, ಮುಂತಾದವರು ಮಲೆನಾಡು ಪ್ರಾಂತ್ಯದವರು ಎನ್ನುವುದು ಗಮನಾರ್ಹ. ಇಂತಹ ಮಹಾನ್ ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಡುವವರಲ್ಲಿ ಪದ್ಮನಾಭ ಶೆಟ್ಟಿಗಾರರು ಸಹ ಒಬ್ಬರು.
ಶೃಂಗೇರಿ ತಾಲೂಕಿನ ಬೇಗಾರಿನಲ್ಲಿ ವಾಸವಾಗಿರುವ ಶೆಟ್ಟಿಗಾರರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಚೇರ್ಕಾಡಿಯವರು. ೧೯೪೮ರಲ್ಲಿ ಚೇರ್ಕಾಡಿಯ ತಿಮ್ಮ ಶೆಟ್ಟಿಗಾರ್ ಹಾಗು ನರಸಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದ ಇವರು ಏಳನೆ ತರಗತಿ ವಿದ್ಯಾಭ್ಯಾಸ ಮಾಡಿ ತಮ್ಮ ಹದಿನಾರನೇ ವಯಸ್ಸಿನಲ್ಲಿ ಯಕ್ಷರಂಗ
ಪ್ರವೇಶ ಮಾಡಿದರು. ಮಟ್ಟಾಡಿ ಶೈಲಿಯ ಪ್ರಾತಿನಿಧಿಕರಾದ ಶ್ರೀನಿವಾಸ ನಾಯ್ಕರಲ್ಲಿ, ಹಾಗು ಕೃಷ್ಣ ಶೆಟ್ಟಿಗಾರರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು ಗೋಪಾಲಕೃಷ್ಣ ಮಾಷ್ಟರಲ್ಲಿ ಮಾತುಗಾರಿಕೆಯ ಹದ ಕಲಿತುಕೊಂಡರು. ಇವರ ವೇಷಗಾರಿಕೆ, ಎತ್ತರದ ನಿಲುವು ಹೆಜ್ಜೆಗಾರಿಕೆಯಲ್ಲಿ ವೀರಭದ್ರ ನಾಯಕರ ಛಾಪನ್ನು ಗುರುತಿಸಬಹುದುದಾಗಿದೆ. ಬಡಗುತಿಟ್ಟಿನ ಗೋಳಿಗರಡಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ನಂತರ ದಿ.ಕಾಳಿಂಗ ನಾವಡರ ಪದ್ಯದಿಂದ ಪ್ರೇರಣೆಗೊಂಡು ಸಾಲಿಗ್ರಾಮ ಮೇಳ ಸೇರಿದರು. ಅಲ್ಲಿನ "ರತಿರೇಖಾ" ಪ್ರಸಂಗದ ಅವರ ಶಶಿಪಾಲನ ಪಾತ್ರ, ಹಾಗು "ಚಲುವೆ ಚಿತ್ರಾವತಿ" ಪ್ರಸಂಗದ ಇವರ ಪಾತ್ರಗಳು ಎಂಬತ್ತರ ದಶಕದಲ್ಲಿ ಅವರಿಗೆ ವಿಶೇಷ ಖ್ಯಾತಿಯನ್ನು ತಂದುಕೊಟ್ಟಿತ್ತು. ಸ್ವತಹ ಅಂದಿನ ಭಾಗವತರಾದ ಕಾಳಿಂಗ ನಾವಡರು ಅವರನ್ನು ಮೆಚ್ಚಿ ಹರಸಿದ್ದರು. ಬಡಗು ತಿಟ್ಟಿನ ಮಂದಾರ್ತಿ ಮೇಳದಲ್ಲಿ ದೀರ್ಘ ಕಾಲ ತಿರುಗಾಟ ಮಾಡಿದ ಇವರು ಸದ್ಯ ತನ್ನ ೬೨ರ ಇಳಿ ವಯಸ್ಸಿನಲ್ಲೂ ಹಿರಿಯಡಕ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ. ತೆಂಕುತಿಟ್ಟಿನ ಸುರತ್ಕಲ್ ಮೇಳದಲ್ಲಿ ಶೇಣಿ ಗೋಪಾಲ ಕೃಷ್ಣ ಭಟ್, ತೆಕ್ಕಟ್ಟೆ ಅನಂದ ಮಾಸ್ತರ್, ವೇಣೂರು ಸುಂದರ ಆಚಾರ್, ಎಂ.ಕೆ.ರಮೇಶಾಚಾರ್ ಮುಂತಾದವರ ಒಡನಾಡಿಯಾಗಿ ತಿರುಗಾಟ ಮಾಡಿದ್ದಾರೆ. ಬಡಗು ಹಾಗು ತೆಂಕು ತಿಟ್ಟಿನ ಸ್ರೀಭೂಮಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅಂದು ಅವರು ನಟಿಸಿದ ಪ್ರಭಾವತಿ, ಭ್ರಮರಕುಂತಳೆ, ಮೀನಾಕ್ಷಿ ಮುಂತಾದ ಪಾತ್ರಗಳು ಜನಮನ ರಂಜಿಸಿದ್ದವು. ನಿರಂತರ ಐದು ದಶಕಗಳ ಕಾಲ ಕಲಾಸಾಧನೆಯಲ್ಲಿ ಪೌರಾಣಿಕ ಪಾತ್ರಗಳಾದ ಕೀಚಕ,
ಕಾರ್ತವೀರ್ಯ, ಭಸ್ಮಾಸುರ ರಾವಣ, ಭೀಷ್ಮ, ಮುಂತಾದ ಪಾತ್ರಗಳಿಗೆ ತಮ್ಮದೆ ನಡೆಯಲ್ಲಿ ಜೀವ ತುಂಬಿದ್ದಾರೆ. ಕೇವಲ ಬಡಾಬಡಗುತಿಟ್ಟಿನವರಿಗೆ ಮಾತ್ರ ಸೀಮಿತವಾಗಿದ್ದ ಕೆಲವೊಂದು ವಿಶಿಷ್ಟ ಪಾತ್ರಗಾದ ಕೀಚಕ, ಕಂಸ, ಭಸ್ಮಾಸುರ, ಮುಂತಾದ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿದ ಇವರ ಇಂತಹ ಹಲವಾರು ಪಾತ್ರಗಳು ಕಲಾರಸಿಕರ ಮನಗೆದ್ದಿವೆ. ಯಕ್ಷಗಾನ ಕಲೆಯಲ್ಲಿ ಸನ್ವಿತವಾದ ನಡೆ,ಕುಣಿತ, ಮುದ್ರೆ, ಹಾವ- ಭಾವ ಮಾತುಗಾರಿಕೆ, ಎಲ್ಲದರಲ್ಲೂ ಪ್ರೌಢಿಮೆ ಸಾಧಿಸಿದ ಇವರು ಸಿದ್ದಿಯ ನೆಲೆಯಲ್ಲಿ ಗುರುತಿಸಬಹುದಾದ ಪ್ರಸಿದ್ದ ಕಲಾವಿದ. ಪೌರಾಣಿಕ ಪ್ರಸಂಗದ ಪಾತ್ರಗಳು ಸ್ವಲ್ಪ ಸೊರಗಿದರೂ ಸಹಿಸದ ಇವರ ಗದಾಯುದ್ದದ ಕೌರವ, ಕರ್ಣಾರ್ಜುನದ ಕರ್ಣ, ರಾವಣ ವಧೆಯ ರಾವಣ, ಶನೀಶ್ವರ,ಅಲ್ಲದೆ ನಾಗಶ್ರೀಯ ಶಿಥಿಲ ಮುಂತಾದ ಪಾತ್ರಗಳು ವಿಮರ್ಶಕರ
ಪರೀಕ್ಷೆಯಲ್ಲಿ ತೇರ್ಗಡೆಯಾದವುಗಳು.
ಲೇಖಕರು - ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ ಮಣಿಪಾಲ.
#Nadanoopura_Yakshothana_Trust-Nada noopura Yakshothana Trust Vandaru ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್